ಮದ್ವೆಯಾಗಿ ಪೋಷಕರ ಜೊತೆ ಮನೆಗೆ ಹೋದ್ಳು-2 ದಿನದ ನಂತ್ರ ಶವವಾಗಿ ಪತ್ತೆಯಾದ್ಳು

Public TV
2 Min Read

ಹೈದರಾಬಾದ್: ಅಪ್ರಾಪ್ತೆಯೊಬ್ಬಳ ಮೃತದೇಹ ಕೊಳದ ಪಕ್ಕ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಅಲ್ಲಗಡ್ಡದಲ್ಲಿ ನಡೆದಿದೆ.

ಲಕ್ಷ್ಮಿ ದೇವಿ (17) ಮೃತ ದುರ್ದೈವಿ. ಈಕೆ ಕೋಟಕೊಂಡುಕುರು ಗ್ರಾಮದ ಚಕಳಿ ಲಕ್ಷ್ಮೀ ನರಸಾಯ ಮತ್ತು ಲಕ್ಷ್ಮಿಯ ಮಗಳಾಗಿದ್ದಾಳೆ. ಅದೇ ಗ್ರಾಮದ ಚಕಲಿ ನಾಗೇಂದ್ರ ನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಪೋಷಕರೆ ಮರ್ಯಾದ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ನಡೆದಿದ್ದೇನು?
ದೇವಿ ಮತ್ತು ನಾಗೇಂದ್ರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ಮದುವೆಯಾಗಲು ಇಷ್ಟಪಟ್ಟಿದ್ದು, ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಆದರೆ ಹುಡುಗಿಯ ಪೋಷಕರು ಮದುವೆಗೆ ನಿರಾಕರಿಸಿದ್ದಾರೆ. ಮನೆಯವರು ಒಪ್ಪದ ಕಾರಣ ಈ ಜೋಡಿ ಎರಡು ವಾರಗಳ ಹಿಂದೆ ಓಡಿ ಹೋಗಿದ್ದಾರೆ. ನಂತರ ಒಂದು ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಆದರೆ ಲಕ್ಷ್ಮೀ ದೇವಿಯ ಪೋಷಕರು ಅಲಗಡ್ಡ ಪೊಲೀಸರಿಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅವರಿಬ್ಬರನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆಸಿ ಕೌನ್ಸಲಿಂಗ್ ಮಾಡಿದ್ದಾರೆ. ಆಗ ಅವರಿಬ್ಬರು ಮದುವೆಯಾಗಿರುವುದು ದೃಢವಾಗಿದೆ. ನಂತರ ಅವರು ನಾವು ಒಟ್ಟಾಗಿ ಇರುತ್ತೇವೆ ಅಥವಾ ಒಟ್ಟಿಗೆ ಸಾಯುತ್ತೇವೆ ಎಂದು ಹೇಳಿದ್ದಾರೆ. ಇವರಿಬ್ಬರ ಅಭಿಪ್ರಾಯವನ್ನು ಗಮನಿಸಿ ನಂತರ ಎರಡು ಕುಟುಂಬದೊಂದಿಗೆ ರಾಜಿ ಮಾಡಿಸಿ ಹುಡುಗಿ ಮೇಜರ್ ಆದ ಮೇಲೆ ಒಟ್ಟಿಗೆ ಇರಲು ಅವಕಾಶ ಮಾಡಿಕೊಡುವುದಾಗಿ ಒಪ್ಪಿಸಿದ್ದು, ನಂತರ ಶನಿವಾರ ಸಂಜೆ ಲಕ್ಷ್ಮಿ ದೇವಿ ತನ್ನ ಪೋಷಕರ ಜೊತೆ ಮನೆಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಆಕೆಯ ಮೃತ ದೇಹವನ್ನು ಗ್ರಾಮ ಕೊಳದ ಬಳಿ ಪತ್ತೆಯಾಗಿದೆ. ದೇವಿಯ ಸಾವು ಮತ್ತು ಅಂತ್ಯಕ್ರಿಯೆಯ ಬಗ್ಗೆ ತಿಳಿದುಕೊಂಡ ಪೊಲೀಸರು ಮಧ್ಯಪ್ರವೇಶಿಸಿ ವಿಚಾರಣೆ ನಡೆಸಿದ್ದಾರೆ. ಆಗ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ನೇಣು ಹಾಕಿಕೊಂಡಿರುವ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಆದರೆ ಆಕೆಯ ತಲೆಯ ಮೇಲೆ ಹೊಡೆದಿರುವ ಗುರುತು ಪತ್ತೆಯಾಗಿದೆ ಅಂತಾ ತಿಳಿಸಿದ್ದಾರೆ.

ತಕ್ಷಣ ನಾವು ಅನುಮಾನಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದೇವೆ. ಸದ್ಯಕ್ಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *