ಜೀವ ಉಳಿಸಿಕೊಳ್ಳಲು ಪ್ರತಿ 8 ಗಂಟೆಗೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ – ಸುಶ್ಮಿತಾ ಸೇನ್

Public TV
2 Min Read

ಮುಂಬೈ: ನನ್ನ ಜೀವವನ್ನು ಉಳಿಸಿಕೊಳ್ಳಲು ಪ್ರತಿ 8 ಗಂಟೆಗೊಮ್ಮೆ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದೆ ಎಂದು ಸ್ವತಃ ಮಾಜಿ ಭುವನ ಸುಂದರಿ, ನಟಿ ಸುಶ್ಮಿತಾ ಸೇನ್ ತಮ್ಮ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಸುಶ್ಮಿತಾ ಸೇನ್ ಅವರು ತಾವು ಜೀವನದಲ್ಲಿ ಅನುಭವಿಸಿದ ಕಹಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. 2014ರಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್‍ನಿಂದ ಮೂತ್ರ ಜನಕಾಂಗದ(ಆ್ಯಡ್ರಿಯಲ್) ಕಾಯಿಲೆಯಿಂದ ಬಳಲುತ್ತಿದ್ದೆ. ಆಗ ನಾನು ಜೀವವನ್ನು ಉಳಿಸಿಕೊಳ್ಳಲು ಹೈಡ್ರೋಕಾರ್ಟಿಸೋನ್ ಔಷಧಿ ತೆಗೆದುಕೊಳ್ಳುತ್ತಿದ್ದೆ. ಅದು ಸ್ಟೀರಾಯ್ಡ್ ಆಗಿತ್ತು. ನಾನು ಜೀವಂತವಾಗಿ ಇರಬೇಕಾದರೆ ಪ್ರತಿ 8 ಗಂಟೆಗೆ ಒಮ್ಮೆ ಅದನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದರು.

ನಾನು ಸೆಲೆಬ್ರೆಟಿ ಆಗಿದ್ದರಿಂದ ಈ ಕಾಯಿಲೆಯಿಂದ ಚೇತರಿಕೊಂಡು ಹೊರಬಂದ ಬಳಿಕ ತುಂಬಾ ಕಷ್ಟ ಪಟ್ಟೆ. ನಾನು ಮಾಜಿ ಭುವನ ಸುಂದರಿ, ಸುಂದರ ಮಹಿಳೆ ಕೂಡ ಹೌದು. ಆದರೆ ಈ ಕಾಯಿಲೆಗೆ ತುತ್ತಾದಾಗ ನನ್ನ ಕೂದಲುಗಳು ಉದುರಲು ಆರಂಭಗೊಂಡಿತ್ತು. ಆಗ ಪ್ರತಿ ನಿತ್ಯ ನಾನು ಕೂದಲನ್ನು ನೋಡಿ ಬೇಸರ ಪಡುತ್ತಿದ್ದೆ. ಸ್ವೀರಾಯ್ಡ್ ತೆಗೆದುಕೊಂಡಿದ್ದರಿಂದ ದೇಹದಲ್ಲಿ ಬಹಳ ಬದಲಾವಣೆಯಾಗಿತ್ತು ಎಂದು ತಿಳಿಸಿದರು.

ನಾನು ತೆಗೆದುಕೊಳ್ಳುತ್ತಿದ್ದ ಸ್ಟೀರಾಯ್ಡ್ ವರ್ಕ್ ಔಟ್ ಮಾಡುವವರು ತೆಗೆದುಕೊಳ್ಳುವ ಡ್ರಗ್ ಆಗಿರಲಿಲ್ಲ. ಇದು ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಇದು ನಿಮ್ಮ ತೂಕ ಹೆಚ್ಚು ಮಾಡುತ್ತದೆ. ಹಾಗೂ ಮೂಳೆಗಳ ಬಲವನ್ನು ಕಡಿಮೆ ಮಾಡುತ್ತಾ ಬರುತ್ತದೆ. ಇದು ಬಿಪಿ ಹೆಚ್ಚು ಮಾಡುತ್ತದೆ. ಆಗ ನಾನು ಬಹಳ ಅನಾರೋಗ್ಯಕ್ಕೆ ತುತ್ತಾಗಿದ್ದೆ. ನನ್ನ ಎಬ್ಬರು ಮಕ್ಕಳನ್ನು ಒಬ್ಬಳೆ ನೋಡಿಕೊಳ್ಳಬೇಕಿತ್ತು ಎಂದು ತಮ್ಮ ನೋವನ್ನು ಹೇಳಿಕೊಂಡರು.

ನನಗಿದ್ದ ಅನಾರೋಗ್ಯದ ಸಮಸ್ಯೆ ನನಗೆ ಹುಚ್ಚು ಹಿಡಿಯುವಂತೆ ಮಾಡುತಿತ್ತು. ಆದರೆ ಶತ್ರುಗಳು ನಮ್ಮಿಂದ ದೂರ ಹೋದರೆ ನಮ್ಮ ಸಾಮರ್ಥ್ಯವೇನು ಎಂದು ನಮಗೆ ತಿಳಿಯುವುದಿಲ್ಲ. ಹಾಗೆಯೇ 2014 ಹಾಗೂ 2016ರಲ್ಲಿ ನಾನಿದ್ದ ಇದ್ದ ಪರಿಸ್ಥಿತಿಗೂ ಇಂದು ಇರುವ ಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಇದರಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ವಿವರಿಸಿದರು.

ಆ ಎರಡು ವರ್ಷದಲ್ಲಿ ನಾನು ಅನಾರೋಗ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದೆ. ವೈದ್ಯರಿಗೆ ನನ್ನ ವೃತ್ತಿಯನ್ನು ಬದಲಿಸುತ್ತೇನೆ ಎಂದಿದ್ದೆ. ವೈದ್ಯರು ನಿರಾಕರಿಸಿದ್ದರೂ ಆ್ಯಟಿ ಗ್ರಾವಿಟಿ ಜಿಮ್ನಾಸ್ಟಿಕ್ ಮಾಡಲು ಆರಂಭಿಸಿದೆ. ಯೋಗ ಮಾಡುವುದನ್ನು ಶುರುಮಾಡಿದೆ. ಆದರೆ 2016ರ ಅಕ್ಟೋಬರ್ ನಲ್ಲಿ ಮತ್ತೆ ನಾನು ಅನಾರೋಗ್ಯಕ್ಕೆ ಗುರಿಯಾದೆ. ಆಗ ನನ್ನನ್ನು ಅಬುಧಾಬಿನಲ್ಲಿದ್ದ ಕ್ಲೇವ್ ಲ್ಯಾಂಡ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಅಲ್ಲಿ ನನ್ನನ್ನು ವೈದ್ಯರು ಪರೀಕ್ಷಿಸಿ, ಚಿಕಿತ್ಸೆ ನೀಡಿ ವಾಪಸ್ ದುಬೈಗೆ ಕಳುಹಿಸಿದರು. ಬಳಿಕ ವೈದ್ಯರು ಕರೆ ಮಾಡಿ ಮತ್ತೆ ನಿಮ್ಮ ದೇಹದಲ್ಲಿ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ನನ್ನ 35 ವರ್ಷಗಳ ಅನುಭವದಲ್ಲಿ ಈ ಕಾಯಿಲೆ ಇದ್ದವರು ಚೇತರಿಸಿಕೊಂಡು ಬಳಿಕ ಅವರಲ್ಲಿ ಮತ್ತೆ ಕಾರ್ಟಿಸೋಲ್ ಹಾರ್ಮೋನ್ ಉತ್ಪತ್ತಿಯಾಗಿದ್ದನ್ನ ನೋಡಿಲ್ಲ ಎಂದಿದ್ದರು ಅಂತ ತಮ್ಮ ಕಾಯಿಲೆ ಬಗ್ಗೆ ಹಂಚಿಕೊಂಡರು.

ಈ ಬಗ್ಗೆ ಹಿಂದೆ ಯಾರಿಗೂ ನಾನು ಪ್ರತಿಕ್ರಿಯಿಸಿರಲಿಲ್ಲ. ಆದರೆ 2016ರಲ್ಲಿ ನಾನು ಸ್ಟೀರಾಯ್ಡ್ ತೆಗೆದುಕೊಳ್ಳುವುದನ್ನ ನಿಲ್ಲಿಸಿದೆ. ಆದಾದ ಬಳಿಕ 2018ರ ಆಗಸ್ಟ್ ವರೆಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿರಲಿಲ್ಲ. ಆದರೆ ಬಳಿಕ ಮತ್ತೆ ಕಾಯಿಲೆಯ ಗುಣಲಕ್ಷಣ ಆರೋಗ್ಯದಲ್ಲಿ ಏರುಪೇರು ಮಾಡಿತ್ತು ಎಂದು ಸುಶ್ಮಿತಾ ತಿಳಿಸಿದ್ದಾರೆ.

ಸದ್ಯ ತಮಗಿದ್ದ ಕಾಯಿಲೆಯನ್ನು ಎದುರಿಸಿ ಈಗ ಸುಶ್ಮಿತಾ ಅವರು ಆರೋಗ್ಯವಾಗಿದ್ದಾರೆ. ನನಗೆ ಧೈರ್ಯ ತುಂಬಿ, ನನ್ನ ಜೊತೆ ಇದ್ದ ಕೆಲ ಮಂದಿಗೆ ತಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂದರ್ಶನದಲ್ಲಿ ಸುಶ್ಮಿತ ಸೇನ್ ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *