ಸುಷ್ಮಾಗೆ ಚಿಕಿತ್ಸೆ ಕೊಡಲು ವೈದ್ಯರು ತಯಾರಿರಲಿಲ್ಲ- ಸತ್ಯಾಂಶ ಬಿಚ್ಚಿಟ್ಟ ಪತಿ ಕೌಶಲ್

Public TV
2 Min Read

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ ಕೊಡಲು ಏಮ್ಸ್ ವೈದ್ಯರು ತಯಾರಿರಲಿಲ್ಲ. ಕೊನೆಗೆ ಒತ್ತಾಯದ ಮೇರೆಗೆ ಚಿಕಿತ್ಸೆ ಕೊಟ್ಟರು ಎಂದು ಸುಷ್ಮಾ ಅವರು ನಿಧನರಾಗುವ ಮುನ್ನ ಮಾಡಲಾಗಿದ್ದ ಶಸ್ತ್ರಚಿಕಿತ್ಸೆ ಬಗ್ಗೆ ಪತಿ ಸ್ವರಾಜ್ ಕೌಶಲ್ ಸತ್ಯಾಂಶ ಬಿಚ್ಚಿಟ್ಟಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರು ಸರಣಿ ಟ್ವೀಟ್ ಮಾಡಿ, ಪತ್ನಿಯ ಶಸ್ತ್ರಚಿಕಿತ್ಸೆ ಹಾಗೂ ಏಮ್ಸ್ ವೈದ್ಯರ ಬಗ್ಗೆ ತಿಳಿಸಿದ್ದಾರೆ. ಸುಷ್ಮಾ ನಿಧನ ಹೊಂದುವ ಮುನ್ನ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಏಮ್ಸ್ ವೈದ್ಯರು ಸುಷ್ಮಾಗೆ ಶಸ್ತ್ರಚಿಕಿತ್ಸೆ ಮಾಡಲು ತಯಾರಿರಲಿಲ್ಲ. ನೀವು ವಿದೇಶದಲ್ಲಿ ಕಿಡ್ನಿ ಕಸಿ ಮಾಡಿಸಿ ಎಂದು ಸಲಹೆ ನೀಡಿದ್ದರು. ಆದರೆ ಸುಷ್ಮಾ ಅದಕ್ಕೆ ಒಪ್ಪದೆ ಭಾರತದಲ್ಲೇ ನನಗೆ ಶಸ್ತ್ರಚಿಕಿತ್ಸೆ ನಡೆಯಬೇಕು ಎಂದು ಬಯಸಿದ್ದರು. ಜನರು ನಮ್ಮ ದೇಶದ ವೈದ್ಯರ ಮೇಲೆ ಬಹಳ ನಂಬಿಕೆ ಇಟ್ಟಿದ್ದಾರೆ. ಒಂದು ವೇಳೆ ನಾನು ನಮ್ಮ ವೈದ್ಯರನ್ನೇ ನಂಬದೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದರೆ ಜನರ ನಂಬಿಕೆಗೆ ಧಕ್ಕೆ ಉಂಟಾಗುತ್ತೆ. ಹೀಗಾಗಿ ನಮ್ಮ ವೈದ್ಯರೇ ನನಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು ಅಂತ ಪತ್ನಿ ದೇಶದ ಮೇಲಿಟ್ಟಿರುವ ಪ್ರೀತಿಯನ್ನು ತಿಳಿಸಿದ್ದಾರೆ. ಇದನ್ನೂ ಓದಿ:  ಸುಷ್ಮಾ ಸ್ವರಾಜ್ ಪ್ರೇಮ್ ಕಹಾನಿ – ಸ್ನೇಹಿತರು ಸತಿ, ಪತಿಗಳಾದ ಕಥೆ ಓದಿ

https://twitter.com/governorswaraj/status/1191434693402644483

ಏಮ್ಸ್ ವೈದ್ಯರು ತಮಗೆ ಯಾವಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎನ್ನುವುದನ್ನು ಸುಷ್ಮಾನೇ ನಿರ್ಧರಿಸಿದ್ದರು. ವಿದೇಶದಲ್ಲಿ ಚಿಕಿತ್ಸೆ ಪಡೆಯುವುದನ್ನು ನಿರಾಕರಿಸಿ, ಭಾರತದಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನೀವು ಕೇವಲ ಶಸ್ತ್ರಚಿಕಿತ್ಸೆಗೆ ಬೇಕಾಗುವ ಉಪಕರಣಗಳನ್ನು ಹಿಡಿದು ನಿಲ್ಲಿ, ಉಳಿದದ್ದೆಲ್ಲಾ ಆ ಕೃಷ್ಣ ನೋಡಿಕೊಳ್ಳುತ್ತಾನೆ ಎಂದು ಸುಷ್ಮಾ ಸ್ವರಾಜ್ ವೈದ್ಯರಿಗೆ ಧೈರ್ಯ ತುಂಬಿದ್ದರು ಅಂತ ಕೌಶಲ್ ಟ್ವೀಟ್‌ನಲ್ಲಿ ಬರೆದು ಪತ್ನಿ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

https://twitter.com/governorswaraj/status/1191436597255966721

ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಸುಷ್ಮಾ ಕುರ್ಚಿಯಲ್ಲಿ ಕೂತು ಖುಷಿಯಿಂದ ಏಮ್ಸ್ ವೈದ್ಯರನ್ನು ಹೊಗಳಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸುವಲ್ಲಿ ವೈದ್ಯರು ಪಟ್ಟ ಶ್ರಮವನ್ನು ಶ್ಲಾಘಿಸಿದರು. ಹಾಗೂ ಅಲ್ಲಿನ ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ತಿಳಿಸಿದ್ದರು. ಏಮ್ಸ್ ವೈದ್ಯರು ಜಗತ್ತಿನ ಬೆಸ್ಟ್ ವೈದ್ಯರು ಎಂದು ಹೊಗಿಳಿದ್ದನ್ನು ನೆನೆದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

https://twitter.com/governorswaraj/status/1191450268027772929

ಹಾಗೆಯೇ ಸುಷ್ಮಾ ಸ್ವರಾಜ್ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ. ಸುಷ್ಮಾ ಅವರು ಧೈರ್ಯ ತುಂಬುತ್ತಿದ್ದ ರೀತಿ, ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸುಷ್ಮಾ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ ಪರಿ ಹಾಗೂ ನಮಗೂ ಧೈರ್ಯ ಹೇಳಿದ್ದನ್ನು ನಾನು ಹಾಗೂ ಬನ್ಸುರಿ ಎಂದಿಗೂ ಮರೆಯಲ್ಲ. ಅವರಿಗೆ ನಾವು ಚಿರಋಣಿ ಎಂದು ಮೋದಿಗೆ ಧನ್ಯವಾದ ತಿಳಿಸಿದರು.

https://twitter.com/governorswaraj/status/1191563447516979200

ಆಗಸ್ಟ್ 6ರಂದು ಸುಷ್ಮಾ ಸ್ವರಾಜ್ ಅವರು ನಿಧರಾದರು. ಏಮ್ಸ್ ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರೆಳೆದಿದ್ದರು. ಸುಷ್ಮಾ ಅವರ ಅಗಲಿಕೆಯಿಂದ ದೇಶಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಆಘಾತವಾಗಿತ್ತು. ವಿದೇಶಾಂಗ ಸಚಿವೆಯಾಗಿ ದೇಶಕ್ಕಾಗಿ ಅವರು ನೀಡಿರುವ ಕೊಡುಗೆ, ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಜನರ ಸಮಸ್ಯೆಗೆ ಅವರು ಸ್ಪಂದಿಸುತ್ತಿದ್ದ ರೀತಿ ಇಂದಿಗೂ ಎಲ್ಲರ ಮನದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *