ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ

Public TV
2 Min Read

ದುಬೈ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಮೊದಲ ಬಾರಿಗೆ ನಡೆದ ಭಾರತ – ಪಾಕಿಸ್ತಾನ ನಡುವಿನ ರಣರೋಚಕ ಪಂದ್ಯ ಈಗ ಚರ್ಚಿತ ವಿಷಯವಾಗಿದೆ. ಈ ನಡುವೆ ಪಾಕ್‌ ಆಟಗಾರರ ಕೈಕುಲುಕದ ತಮ್ಮ ನಿರ್ಧಾರವನ್ನು ಟೀಂ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ (Suryakumar Yadav) ಸಮರ್ಥನೆ ಮಾಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸ್ಕೈ ಹೇಳಿದ್ದೇನು?
ಪಾಕಿಸ್ತಾನಿ ತಂಡದೊಂದಿಗೆ ಕೈಕುಲುಕಲು ನಿರಾಕರಿಸಿದ್ದು ಕ್ರೀಡಾ ಮನೋಭಾವಕ್ಕೆ ವಿರುದ್ಧ ಎಂದು ನೀವು ಭಾವಿಸುತ್ತೀರಾ? ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ಕೆಲವು ವಿಷಯಗಳು ಕ್ರೀಡಾ ಮನೋಭಾವಕ್ಕಿಂತ ದೊಡ್ಡದಿವೆ ಎಂದು ಹೇಳಿದರು.

ನಮ್ಮ ಸರ್ಕಾರ ಮತ್ತು ಬಿಸಿಸಿಐ (BCCI) ಎಲ್ಲರೂ ಈ ನಿರ್ಧಾರದ ಬಗ್ಗೆ ಒಗ್ಗಟ್ಟಿನಿಂದ ಇದ್ದಾರೆ. ನಾವು ಇಲ್ಲಿಗೆ ಆಟವಾಡಲು ಮಾತ್ರ ಬಂದಿದ್ದೇವೆ. ಅವರಿಗೆ ಸೂಕ್ತ ಉತ್ತರವನ್ನೂ ಕೊಟ್ಟಿದ್ದೇವೆ ಅಂತ ಭಾವಿಸುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಪೋಸ್ಟ್‌ ಪ್ರಸೆಂಟೇಷನ್‌ನಲ್ಲಿ ಮಾತನಾಡಿದ ಸೂರ್ಯಕುಮಾರ್‌, ಈ ಪಂದ್ಯದ ಗೆಲುವನ್ನು ಪಹಲ್ಗಾಮ್‌ (Pahalgam Attack) ಸಂತ್ರಸ್ತರು ಹಾಗೂ ದೇಶದ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ. ನಾವು ಪಹಲ್ಗಮ್‌ನ ಬಲಿಪಶು ಕುಟುಂಬಗಳೊಂದಿಗೆ ನಿಲ್ಲುತ್ತೇವೆ. ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳು (Indian Armed forces) ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದರು.

ಮೈದಾನದಲ್ಲೇ ಪಾಕ್‌ ಮಾನ ಕಳೆದ ಭಾರತ
ಎಷ್ಟೇ ವೈರತ್ವವಿದ್ದರೂ ಪಂದ್ಯದ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಒಂದೆರಡು ಬಾರಿಯಾದರೂ ಮಾತುಕತೆ ನಡೆಯುತ್ತದೆ. ಒಬ್ಬರನ್ನೊಬ್ಬರು ಕಿಚಾಯಿಸುವುದು, ಕಾಲೆಳೆಯುವುದು, ಬೈದುಕೊಳ್ಳುವುದು, ಗುರಾಯಿಸುವುದು ಇದ್ದಿದ್ದೇ. ಆದರೆ ಭಾನುವಾರದ ಪಂದ್ಯದಲ್ಲಿ ಇದಾವುದು ಕಾಣಿಸಿಲ್ಲ. ಪಂದ್ಯದ ವೇಳೆ ಭಾರತ ತಂಡದ ಆಟಗಾರರು ಪಾಕಿಸ್ತಾನ ಆಟಗಾರರ ಜೊತೆ ಮಾತಾಡುವುದಿರಲಿ, ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ.

ಪಾಕ್‌ನ ಅಭಿನಂದನೆ ಸ್ವೀಕರಿಸದ ಭಾರತ
ಸಿಕ್ಸ‌ರ್ ಸಿಡಿಸುವ ಗೆಲುವು ದಾಖಲಿಸಿದ ಬಳಿಕ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌, ಪಾಕಿಗಳಿಗೆ ಹ್ಯಾಂಡ್‌ ಶೇಕ್ ಮಾಡದೆ ತಮ್ಮ ಜೊತೆಗಾರ ದುಬೆ ಜೊತೆ ಪೆವಿಲಿಯನ್‌ಗೆ ತೆರಳಿದರು. ಟೀಮ್‌ ಇಂಡಿಯಾದ ಯಾವುದೇ ಆಟಗಾರರು ಡ್ರೆಸ್ಸಿಂಗ್ ರೂಂನಿಂದ ಇಳಿದು ಕೆಳಕ್ಕೇ ಬರಲಿಲ್ಲ. ಭಾರತೀಯರನ್ನು ಅಭಿನಂದಿಸಲು ಪಾಕ್ ಆಟಗಾರರು ಮೈದಾನದಲ್ಲೇ ಕಾಯುತ್ತಾ ನಿಂತಿದ್ದರು. ಆದರೆ ಭಾರತೀಯರೆಲ್ಲರೂ ಡ್ರೆಸ್ಸಿಂಗ್ ರೂಂ ಒಳಕ್ಕೆ ಹೋಗಿ, ಬಾಗಿಲು ಬಂದ್ ಮಾಡಿಕೊಂಡರು.

ಪಂದ್ಯದ ಫಲಿತಾಂಶ
ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಪಾಕ್‌ 7 ವಿಕೆಟ್‌ಗೆ ಕೇವಲ 127 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಭಾರತ 15.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿ ಗೆಲುವು ಸಾಧಿಸಿತು.

Share This Article