ದುಬೈ: ಏಷ್ಯಾ ಕಪ್ 2025ರ ಟೂರ್ನಿಯ ಭಾರತ ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಬರ್ತ್‌ಡೇ ದಿನವೇ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಸಿಹಿ ನೀಡಿದ್ದಾರೆ.
ಭಾನುವಾರದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನ ಆಟವಾಡಿ ಗಮನ ಸೆಳೆದರು. 37 ಎಸೆತಗಳಲ್ಲಿ 47 ರನ್ ಗಳಿಸಿದರು. ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು. ಆಟ ಮುಗಿದ ಮೇಲೆ ಪ್ರೈಸ್‌ಮನಿ ಕೊಡುವ ಸಂದರ್ಭದಲ್ಲಿ ಸೂರ್ಯಕುಮಾರ್‌ಗೆ ಬರ್ತ್‌ಡೇ ವಿಶ್ ಮಾಡಲಾಯಿತು. ಆಗ ಸಹ ಆಟಗಾರರೆಲ್ಲಾ ನಾಯಕನಿಗೆ ಶುಭಾಶಯ ತಿಳಿಸಿದರು.
1990ರ ಸೆಪ್ಟೆಂಬರ್ 14 ರಂದು ಜನಿಸಿದ ಯಾದವ್‌ಗೆ ಈಗ 35ರ ಸಂಭ್ರಮ. ನಾಯಕ ಸೂರ್ಯಕುಮಾರ್ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬರ್ತ್‌ಡೇ ಜೊತೆಗೆ ತಂಡದ ಗೆಲುವಿನ ಡಬಲ್ ಸಂಭ್ರಮವನ್ನು ಯಾದವ್ ಪಡೆದುಕೊಂಡಿದ್ದಾರೆ.
ಏಷ್ಯಾ ಕಪ್ ಟೂರ್ನಿಯ ಭಾರತ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಆಪರೇಷನ್ ಸಿಂಧೂರದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.
ಏಷ್ಯಾ ಕಪ್ 2025ರ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾದ ಬೌಲಿಂಗ್ ಮತ್ತು ಬ್ಯಾಟಿಂಗ್ ಅಬ್ಬರಕ್ಕೆ ಪಾಕ್ ಮಣಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಭಾರತ ತಂಡ 15.4 ಓವರ್‌ಗೆ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿದೆ.