ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

Public TV
1 Min Read

ದುಬೈ: ಇಲ್ಲಿನ ನಡೆದ ಏಷ್ಯಾ ಕಪ್‌ 2025ರ ಟೂರ್ನಿಯ ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಅರ್ಪಿಸಿದ್ದಾರೆ.

ಪಂದ್ಯ ಗೆದ್ದ ಬಳಿಕ ಮಾತನಾಡಿದ ಸೂರ್ಯಕುಮಾರ್, ಇದೊಂದು ಪರಿಪೂರ್ಣ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಈ ಗೆಲುವನ್ನು ನಮ್ಮ ಎಲ್ಲಾ ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.

ಟಾಸ್‌ ಸಮಯದಲ್ಲಿ ಪಾಕ್‌ ನಾಯಕನಿಗೆ ಹಸ್ತಾಲಾಘವ ಮಾಡಲು ಭಾರತ ತಂಡದ ನಾಯಕ ಸೂರ್ಯಕುಮಾರ್‌ ನಿರಾಕರಿಸಿದರು. ಕೊನೆಗೆ ವಿನ್ನಿಂಗ್ ಶಾಟ್ ಬಾರಿಸಿ ಸಹಪಾಠಿ ಶಿವಂ ದುಬೆಗೆ ಮಾತ್ರ ಹ್ಯಾಂಡ್‌ಶೇಕ್ ಮಾಡಿದ ಸೂರ್ಯ, ಪಾಕ್‌ ಆಟಗಾರರಿಗೆ ಹಸ್ತಾಲಾಘವ ಮಾಡದೇ ಹೊರಟರು.

ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಮಾರಕ ಮತ್ತು ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಜೀವಗಳು ಬಲಿಯಾದವು. ಇದರ ನಂತರ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ಘಟನೆಗಳಾದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾಗಿವೆ.

Share This Article