ಮಿಸ್ಟರ್‌-360 ಸೂರ್ಯಕುಮಾರ್‌ ಕಂಬ್ಯಾಕ್‌ – ಮುಂಬೈ ತಂಡಕ್ಕಿನ್ನು ಆನೆ ಬಲ!

Public TV
2 Min Read

ನವದೆಹಲಿ: ವಿಶ್ವದ ನಂ.1 ಟಿ20 ಬ್ಯಾಟರ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಸಂಪೂರ್ಣ ಫಿಟ್‌ ಆಗಿದ್ದು ಸದ್ಯದಲ್ಲೇ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಹ್ಯಾಟ್ರಿಕ್‌ ಸೋಲಿನಿಂದ ಕಂಗಾಲಾಗಿರುವ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಆನೆಬಲ ಬಂದಂತಾಗಿದೆ.

ಸದ್ಯ ಮೆಡಿಕಲ್‌ ಫಿಟ್‌ನೆಸ್‌ ಪಾಸ್‌ ಮಾಡಿರುವ ಸೂರ್ಯ ಶುಕ್ರವಾರ (ಏ.5) ರಂದು ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸೂಪರ್‌ ಸಂಡೇ (ಏ.7) ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಸೂರ್ಯ ಕಣಕ್ಕಿಳಿದು ಅಬ್ಬರಿಸಲಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

2023ರ ವಿಶ್ವಕಪ್‌ ಬಳಿಕ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 5 ಪಂದ್ಯಗಳ ಟಿ20 ತಂಡಕ್ಕೆ ನಾಯಕತ್ವ ವಹಿಸಿದ್ದ ಸೂರ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದರು. ಸರಣಿಯ 3ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಸ್ಕೈ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಸೂರ್ಯಕುಮಾರ್‌ ಯಾದವ್‌ ಸ್ಪೋರ್ಟ್ಸ್‌ ಹೆರ್ನಿಯಾದಲ್ಲಿ ತಮ್ಮ ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಕಾರಣದಿಂದ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಇಲ್ಲಿಯವರೆಗೂ ಅವರು ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿದ್ದರು.

ಫಿಟ್‌ನೆಸ್‌ನಲ್ಲಿ SKY ಪಾಸ್‌:
ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಸೂರ್ಯಕುಮಾರ್‌ ಯಾದವ್‌ ಅವರು ಎನ್‌ಸಿಎನಲ್ಲಿ ಫಿಟ್‌ನೆಸ್‌ ಪರೀಕ್ಷೆ ಪಾಸ್‌ ಮಾಡಿದ್ದಾರೆ. ಆದ್ದರಿಂದ ಅವರು ಶುಕ್ರವಾರ (ಏ.5) ರಂದು ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ‌ಕೆಕೆಆರ್‌ ರನ್‌ ಹೊಳೆಯಲ್ಲಿ ಮುಳುಗಿದ ಡೆಲ್ಲಿ – ನೈಟ್‌ರೈಡರ್ಸ್‌ಗೆ 106 ರನ್‌ಗಳ ಭರ್ಜರಿ ಜಯ

ಗೆಲುವಿನ ಖಾತೆ ತೆರೆಯುತ್ತಾ ಮುಂಬೈ?
ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುಜರಾತ್‌ ಟೈಟನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಸೋಲುಗಳ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ ಕುಸಿದಿದೆ.

Share This Article