ಬಿಎಸ್‌ವೈ ಮನೆಯಲ್ಲಿ ಅಮಿತ್ ಶಾ ನಡೆಗೆ ಅಚ್ಚರಿ – ಭಾರೀ ಚರ್ಚೆ

Public TV
3 Min Read

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಕಾವೇರಿ ನಿವಾಸದಲ್ಲಿ ಯಾರೂ ಊಹಿಸದ ನಡೆ ಪ್ರದರ್ಶಿಸಿ ಕುತೂಹಲ ಮೂಡಿಸಿದ್ದಾರೆ.

 

ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಶುಕ್ರವಾರ ಉಪಾಹಾರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅಮಿತ್ ಶಾ, ಬಿವೈ ವಿಜಯೇಂದ್ರ (BY Vijayendra) ಅವರಿಂದಲೇ ಹೂಗುಚ್ಛ ಪಡೆದು ಬಳಿಕ ತಬ್ಬಿಕೊಂಡು ಬೆನ್ನು ತಟ್ಟಿದ್ದಾರೆ. ಅಮಿತ್ ಶಾ ಅವರ ಈ ನಡೆ ಈಗ ಭಾರೀ ಕುತೂಹಲ ಮತ್ತು ಚರ್ಚೆ ಹುಟ್ಟು ಹಾಕಿದೆ. ಅಮಿತ್ ಶಾ ಹೀಗೇಕೆ ಮಾಡಿದರು? ಇದು ಯಾರಿಗೆ ಸಂದೇಶ? ಮುಂದಿನ ಸಂಭಾವ್ಯ ವಿದ್ಯಮಾನಗಳಿಗೆ ಕೊಟ್ಟ ಸುಳಿವಾ? ಎಂದು ಬಿಜೆಪಿ (BJP) ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಬಿಎಸ್‌ವೈ ಆಹ್ವಾನದ ಹಿನ್ನೆಲೆಯಲ್ಲಿ ಬೆಳಗ್ಗೆ 9:40ರ ವೇಳೆಗೆ ಅಮಿತ್ ಶಾ ಕಾವೇರಿ ನಿವಾಸಕ್ಕೆ ಉಪಾಹಾರಕ್ಕೆ ಬಂದಿದ್ದರು. ಅಮಿತ್ ಶಾ ಸ್ವಾಗತಿಸಲು ನಿವಾಸದ ಬಾಗಿಲ ಬಳಿಯೇ ಹೂಗುಚ್ಚ ಹಿಡಿದುಕೊಂಡು ಬಿಎಸ್‌ವೈ ಮತ್ತು ಪುತ್ರ ವಿಜಯೇಂದ್ರ ನಿಂತಿದ್ದರು. ಅಮಿತ್ ಶಾ ಅಲ್ಲಿಗೆ ಆಗಮಿಸಿ, ಕಾರಿನಿಂದ ಇಳಿದೊಡನೆ ಆ ಕ್ಷಣಕ್ಕೆ ಏನೂ ಯೋಚನೆ ಮಾಡಿದ್ದರೋ ಏನೋ. ಇನ್ನೇನು ಶಾಗೆ ಪುಷ್ಪಗುಚ್ಛ ಕೊಡಬೇಕು ಎಂದು ಯಡಿಯೂರಪ್ಪ ಮುಂದೆ ಬಂದಿದ್ದರು. ಆದರೆ ಆಗ ಆ ಹೂಗುಚ್ಛ ವಿಜಯೇಂದ್ರ ಕೈಗೆ ಕೊಡುವಂತೆ ಬಿಎಸ್‌ವೈಗೆ ಅಮಿತ್ ಶಾ ಸೂಚಿಸಿದರು. ಯಡಿಯೂರಪ್ಪ ಮೊದಲು ಗೊಂದಲವಾದರೂ ಕೂಡಲೇ ಅರ್ಥೈಸಿಕೊಂಡು ವಿಜಯೇಂದ್ರ ಕೈಗೆ ತಮ್ಮ ಕೈಯಲ್ಲಿದ್ದ ಹೂಗುಚ್ಛ ನೀಡಿದರು. ಬಳಿಕ ಅಮಿತ್ ಶಾ ವಿಜಯೇಂದ್ರ ಕೈಯಿಂದ ಹೂಗುಚ್ಛ ಸ್ವೀಕರಿಸಿ, ನಗುತ್ತಾ ಅವರನ್ನು ತಬ್ಬಿಕೊಂಡಿದ್ದಲ್ಲದೇ ಬೆನ್ನು ತಟ್ಟಿ ಫೋಟೋಗೆ ಪೋಸ್ ಕೊಟ್ಟರು. ಅಮಿತ್ ಶಾ ಅವರ ಈ ನಡೆಗೆ ಒಂದು ಕ್ಷಣ ಅಲ್ಲಿದ್ದವರೆಲ್ಲ ಗಲಿಬಿಲಿಯಾದರು.

ಅಮಿತ್ ಶಾ ಅವರ ನಡೆ ಈಗ ಸಾಕಷ್ಟು ಚರ್ಚೆ, ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವೀಡಿಯೋ ಹರಿದಾಡುತ್ತಿದೆ. ಶಾ ನಡೆ ಬಗ್ಗೆ ಹಲವು ರೀತಿಯ ತರ್ಕ, ವಿಶ್ಲೇಷಣೆಗಳು ನಡಿಯುತ್ತಿವೆ. ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಇದು ಅಮಿತ್ ಶಾ ಪೊಲಿಟಿಕಲ್ ಗೇಮ್ ಪ್ಲಾನ್ ಎನ್ನಲಾಗಿದೆ. ಇನ್ನು ಈ ಕುರಿತು ಮಾತಾಡಿದ ವಿಜಯೇಂದ್ರ ಅಮಿತ್ ಶಾ ತಮಗೆ ಆನೆ ಬಲ ನೀಡಿದ್ದಾರೆ ಎಂದು ಹರ್ಷದಿಂದ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ

ಬಿಎಸ್‌ವೈ ನಿವಾಸಕ್ಕೆ ಭೇಟಿ ಹಾಗೂ ವಿಜಯೇಂದ್ರ ತಬ್ಬಿ ಬೆನ್ನು ತಟ್ಟುವ ಮೂಲಕ ಪಕ್ಷಕ್ಕೆ, ವಿಪಕ್ಷಗಳಿಗೆ ಹಾಗೂ ಲಿಂಗಾಯತ ಸಮುದಾಯಕ್ಕೆ ಅಮಿತ್ ಶಾ ಮಹತ್ವದ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದೇತೀರಲು ಪಣ ತೊಟ್ಟಿರುವ ಬಿಜೆಪಿ ವರಿಷ್ಠರು ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸುತ್ತಿದಾರೆ. ಈ ಪ್ರಸಂಗವೂ ಅದರಲ್ಲೊಂದು ಎನ್ನಲಾಗಿದೆ. ಒಟ್ಟಿನಲ್ಲಿ ವಿಜಯೇಂದ್ರ ಅವರ ಮಟ್ಟಿಗಂತೂ ಅಮಿತ್ ಶಾ ಅಭಯ ಬಹಳ ಪರಿಣಾಮ ಬೀರಲಿದೆ ಎಂದು ತರ್ಕಿಸಲಾಗುತ್ತಿದೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ

ಅಮಿತ್ ಶಾ ನಡೆ ಹಿಂದಿನ ರಾಜಕೀಯ ಸಂದೇಶ ಏನು? ಯಾರಿಗೆ?
* ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೂ ಈ ಚುನಾವಣೆಗೆ ಅತಿ ಮುಖ್ಯ ಎಂಬ ಸಂದೇಶ.
* ವಿಜಯೇಂದ್ರಗೆ ಹೈಕಮಾಂಡ್ ಅಭಯ ಮೂಲಕ ಯಡಿಯೂರಪ್ಪರಲ್ಲಿ ಸಮಾಧಾನ, ವಿಶ್ವಾಸ ವೃದ್ಧಿ ಉದ್ದೇಶ.
* ಮುಂದಿನ ದಿನಗಳಲ್ಲಿ ವಿಜಯೇಂದ್ರಗೆ ಪ್ರಮುಖ ಸ್ಥಾನದ ಜೊತೆ ಈ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಡುವ ಸುಳಿವು.
* ಬಿಎಸ್‌ವೈ ಮತ್ತು ವಿಜಯೇಂದ್ರ ಕಡೆಗಣಿಸಿಲ್ಲ ಎಂಬ ಮಹತ್ವದ ಸಂದೇಶ.
* ವೀರಶೈವ ಲಿಂಗಾಯತ ಮತಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಉದ್ದೇಶ.
* ಲಿಂಗಾಯತ ಸಮುದಾಯದ ಸಿಟ್ಟನ್ನು ಶಮನಗೊಳಿಸುವ ಉದ್ದೇಶ.
* ಬಿಜೆಪಿಯೊಳಗಿನ ಬಣ ರಾಜಕಾರಣ ಶಮನ ಪ್ರಯತ್ನ.
* ಪಕ್ಷ ಲಿಂಗಾಯತ ನಾಯಕರ ಮನವೊಲಿಸಿ ಬ್ಯಾಲೆನ್ಸ್ ಮಾಡುವ ಉದ್ದೇಶ.

Share This Article
Leave a Comment

Leave a Reply

Your email address will not be published. Required fields are marked *