ಸಸಿಹಿತ್ಲು ಬೀಚ್‍ನಲ್ಲಿ ಕಡಲಬ್ಬರದ ಅಲೆಗಳ ಜೊತೆ ಸರ್ಫರ್‌ಗಳ ಕಾದಾಟ!

Public TV
1 Min Read

– ದೇಶ-ವಿದೇಶಗಳಿಂದ ಬಂದ ಸರ್ಫರ್ ಗಳಿಂದ ಸಾಹಸ

ಮಂಗಳೂರು: ಸದ್ಯ ಕಡಲನಗರಿ ಮಂಗಳೂರಿನಲ್ಲಿ ಸರ್ಫರ್ ಗಳದ್ದೇ ಹವಾ. ನಗರದ ಹೊರವಲಯದ ಸಸಿಹಿತ್ಲು ಬೀಚ್ ನಲ್ಲಿ (Sasihitlu Beach) ಸಾಹಸ ಲೋಕವೇ ನಿರ್ಮಾಣವಾಗಿದೆ. ಅರಬ್ಬೀ ಸಮುದ್ರದ (Arabian Sea) ರಕ್ಕಸ ಅಲೆಗಳಿಗೆ ಸಾಹಸಿಗಳು ಸವಾಲೆಸೆಯುತ್ತಿದ್ದಾರೆ.

ಹೌದು. ಭಾರತ ಸರ್ಫಿಂಗ್ ಫೆಡರೇಶನ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರ ಸರ್ಫ್ ಕ್ಲಬ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಓಪನ್ ಸರ್ಫಿಂಗ್ ಚಾಂಪಿಯನ್ ಶಿಪ್ ಕೂಟ ನಡೆಯುತ್ತಿದೆ. ಸುಂದರ ಸಸಿಹಿತ್ಲು ಬೀಚ್ ನಲ್ಲಿ ಕರಾವಳಿ ರಾಜ್ಯಗಳ ಪ್ರಮುಖ ಸರ್ಫರ್ ಗಳು ಕಡಲ ಅಲೆಗಳಿಗೆ ಸವಾಲೆಸೆಯುತ್ತಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಾಂಡಿಚೇರಿಯ ಸರ್ಫರ್ ಗಳು ಈ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಈ ಸರ್ಫಿಂಗ್ ಚಾಂಪಿಯನ್ ಶಿಪ್‍ನಲ್ಲಿ ಪುರುಷರ ವಿಭಾಗ, ಮಹಿಳೆಯರ ವಿಭಾಗ, 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಸ್ಪರ್ಧೆ ನಡೆದಿದೆ. ಈ ಮೊದಲು ಮಾರ್ಚ್ ನಲ್ಲಿ ಕೇರಳದ ವರ್ಕಲದಲ್ಲಿ ಮೊದಲ ಸ್ಪರ್ಧೆ ನಡೆದಿತ್ತು. ಈ ಬಾರಿಯ ಎರಡನೇ ಸ್ಪರ್ಧೆ ಸಸಿಹಿತ್ಲುನಲ್ಲಿ ನಡೆಯುತ್ತಿದೆ ಎಂದು ಸಫಿರ್ಂಗ್ ಸ್ವಾಮಿ ಫೌಂಡೇಶನ್ ಸದಸ್ಯ ರಾಮ್ ಮೋಹನ್ ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲಾ ಎಕ್ಸಿಟ್‌ ಪೋಲ್‌ಗಳು ಖಂಡಿತಾ ಸುಳ್ಳು: ಕೇಜ್ರಿವಾಲ್‌

ಸರ್ಫರ್ ಗಳ ಸಾಹಸ ನೆರೆದಿದ್ದ ಪ್ರವಾಸಿಗರ ಗಮನಸೆಳೆದಿದೆ. ಈ ಸರ್ಫಿಂಗ್ ನೋಡಲೆಂದೇ ವಿದೇಶಗಳಿಂದ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಸಕ್ತರು ಬಂದಿದ್ದರು. ಸುಡು ಬಿಸಿಲ ನಡುವೆ ಭಾರೀ ಗಾತ್ರದ ಅಲೆಗಳ ನಡುವೆ ಸರ್ಫರ್ ಗಳ ಸಾಹಸವನ್ನು ಕಣ್ತುಂಬಿಕೊಂಡು ಭೇಷ್ ಅಂದಿದ್ದಾರೆ.

ಒಟ್ಟಿನಲ್ಲಿ ಮುಂಗಾರಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕಡಲು ಮುಂಗಾರಿನ ಸ್ವಾಗತಕ್ಕೆ ಸಜ್ಜಾಗಿದೆ.ಅಲೆಗಳ ಭಾರೀ ಏರಿಳಿತ ಕಣ್ಣಿಗೆ ಭಯತಂದರೆ,‌ ಸರ್ಫರ್ ಗಳ ಸಾಹಸ ಮನಸ್ಸಿಗೆ ಮುದ ನೀಡಿದೆ.

Share This Article