ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

Public TV
2 Min Read

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್‌ ರೈನಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸೇರಿದಂತೆ ಎಲ್ಲಾ ಮಾದರಿಯ ದೇಶಿ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿದ ಅವರು, ನನ್ನ ದೇಶ ಮತ್ತು ರಾಜ್ಯ ಉತ್ತರ ಪ್ರದೇಶವನ್ನು ಪ್ರತಿನಿಧಿಸುವುದು ಒಂದು ಗೌರವ. ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕೆಲ ದಿನಗಳಿಂದ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ರೈನಾ 2023ರ ಐಪಿಎಲ್‌ನಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿತ್ತು.  ಸೋಮವಾರ ಟ್ವಿಟ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೋ ಅಪ್ಲೋಡ್‌ ಮಾಡಿದ್ದರು. ಆದರೆ ಈಗ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

2020ರಲ್ಲಿ ಎಂ.ಎಸ್‌ ಧೋನಿ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಿನವೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದನ್ನೂ ಓದಿ: ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

ಐಪಿಎಲ್‌ 2022 ಟೂರ್ನಿ ಸಲುವಾಗಿ ನಡೆದ ಮೆಗಾ ಆಕ್ಷನ್‌ಗೂ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸುರೇಶ್‌ ರೈನಾ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಯ ಹೊಂದಿದ್ದ ರೈನಾ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಕೋವಿಡ್‌ ಕಾರಣದಿಂದ ಐಪಿಎಲ್‌ 2021ರಲ್ಲಿ ಆಡಿರಲಿಲ್ಲ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಇನ್ನು 2-3 ವರ್ಷ ಕ್ರಿಕೆಟ್‌ ಆಡುವ ಬಯಕೆಯನ್ನು ಹೊಂದಿದ್ದೇನೆ. ಇಂದು ಉತ್ತರ ಪ್ರದೇಶದ ತಂಡ ಪ್ರತಿಭಾನ್ವಿತ ಆಟಗಾರನ್ನು ಹೊಂದಿದೆ. ಹೀಗಾಗಿ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಡಲು ಉತ್ತರ ಪ್ರದೇಶ ಕ್ರಿಕೆಟ್‌ ಬೋರ್ಡ್‌ನಿಂದಲೂ ಎನ್‌ಒಸಿ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

ವಿಶ್ವದ ವಿವಿಧ ಲೀಗ್‌ಗಳಲ್ಲಿ ಆಡುವ ಉದ್ದೇಶ ಹೊಂದಿದ್ದೇನೆ. ದಕ್ಷಿಣ ಆಫ್ರಿಕಾ, ಯುಎಇ ಮತ್ತು ಶ್ರೀಲಂಕಾದ ಫ್ರಾಂಚೈಸಿಗಳು ಈಗಾಗಲೇ ನನ್ನನ್ನು ಸಂಪರ್ಕಿಸಿವೆ. ನನ್ನ ವೃತ್ತಿಬದುಕಿಗೆ ನೆರವಾದ ಬಿಸಿಸಿಐ ಮತ್ತು ಯುಪಿಸಿಎಗೆ ಧನ್ಯವಾದ. ನನ್ನ ನಿರ್ಧಾರದ ಬಗ್ಗೆ ಬಿಸಿಸಿಐಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ 5,000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ಸುರೇಶ್‌ ರೈನಾ ಹೊಂದಿದ್ದಾರೆ. ಈವರೆಗೆ ಆಡಿದ 205 ಪಂದ್ಯಗಳಿಂದ 5,528 ರನ್‌ ಹೊಡೆದಿದ್ದಾರೆ.

ಸುಮಾರು 13 ವರ್ಷಗಳ ಕಾಲ ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಸುರೇಶ್ ರೈನಾ, 18 ಟೆಸ್ಟ್, 226 ಏಕದಿನ ಪಂದ್ಯಗಳು ಹಾಗೂ 78 ಟಿ20 ಪಂದ್ಯಗಳನ್ನ ಆಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಸರಿಸುಮಾರು 8,000 ರನ್‍ಗಳನ್ನ ಪೂರೈಸಿದ್ದಾರೆ. ಅಲ್ಲದೇ 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿಗೆ ಸುರೇಶ್ ರೈನಾ ಅವರ ಪಾತ್ರವೂ ಅಪಾರವಾಗಿದೆ. ಕೆಲ ಪಂದ್ಯಗಳಲ್ಲಿ ನಾಯಕನಾಗಿಯೂ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *