ಬೆಂಗಳೂರು: ಅಧಿವೇಶನ ಬಂದರೆ ಸಾಕು ಸಾವಿರಾರು ಪುಟಗಳ ಪೇಪರ್ ಬಳಕೆ ಆಗುತ್ತೆ. ಪ್ರಶ್ನೋತ್ತರ, ವಿಧೇಯಕಗಳು ಹೀಗೆ ಸಾವಿರಾರು ಪುಟಗಳ ಪೇಪರ್‍ಗಳು ಅವಶ್ಯಕ ಇವೆ. ಇದರಿಂದಾಗಿ ಲಕ್ಷಾಂತರ ರೂ ನಷ್ಟವಾಗುತ್ತಿದೆ. ಹೀಗಾಗಿ ಪೇಪರ್ ಬಳಕೆಯನ್ನು ನಿಲ್ಲಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಪೇಪರ್ ಲೆಸ್ ಅಧಿವೇಶನದ ವಿಷಯ ಪ್ರಸ್ತಾಪ ಮಾಡಿದರು.
ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆ ಬೆಂಗಳೂರಿಗೆ ಸಂಬಂಧಿಸಿದ ಪ್ರಶ್ನೆಯನ್ನು ಅರಣ್ಯ ಇಲಾಖೆ ಸಚಿವರಿಗೆ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಕೇಳಿದರು. ಮಾಹಿತಿ ಕೊಡೋಕೆ ಸಚಿವರು ಉತ್ತರವನ್ನು ಸಿಡಿಯಲ್ಲಿ ಕೊಟ್ಟಿದ್ದರು. ಆದರೆ ಉತ್ತರ ಸಿಡಿಯಲ್ಲಿ ಕೊಟ್ಟಿದ್ದಕ್ಕೆ ಸದಸ್ಯ ರಮೇಶ್ ವಿರೋಧ ವ್ಯಕ್ತಪಡಿಸಿದರು. ಪಿ.ಆರ್.ರಮೇಶ್ ವಿರೋಧಕ್ಕೆ ಉಳಿದ ವಿಪಕ್ಷ ಸದಸ್ಯರು ಧ್ವನಿಗೂಡಿಸಿದರು. ಪ್ರಶ್ನೆ ಕೇಳಿದವರಿಗೆ ಕೇವಲ ಸಿಡಿ ಕೊಡ್ತೀರಾ. ಎಲ್ಲಾ ಸದಸ್ಯರಿಗೂ ಕೊಡಬೇಕು. ಹೀಗೆ ಪ್ರಶ್ನೆ ಕೇಳೋರಿಗೆ ಮಾತ್ರ ಸಿಡಿ ಕೊಡೋದು ಸರಿಯಲ್ಲ. ಇದು ಹೊಸ ಸಂಪ್ರದಾಯಕ್ಕೆ ನಾಂದಿ ಆಗುತ್ತೆ ಎಂದು ಸರ್ಕಾರದ ವಿರುದ್ಧ ಎಸ್.ಆರ್.ಪಾಟೀಲ್, ರೇವಣ್ಣ, ಅಪ್ಪಾಜಿಗೌಡ, ಶರವಣ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎದ್ದು ನಿಂತ ಸಚಿವ ಸುರೇಶ್ ಕುಮಾರ್ ಉತ್ತರ ಜಾಸ್ತಿ ಇದೆ. ಹೀಗಾಗಿ ಸಿಡಿ ಕೊಟ್ಟಿದ್ದೇವೆ. ಎಲ್ಲರಿಗೂ ಸಿಡಿ ಕೊಡುತ್ತೇವೆ ಎಂದರು. ಆದರೆ ಸಚಿವರ ಮಾತಿಗೆ ಒಪ್ಪದ ಸದಸ್ಯರು ಮತ್ತೆ ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಈ ವೇಳೆ ಮಾತಿನ ಚಕಮಕಿ ನಡೆಯಿತು. ಬಳಿಕ ಸಚಿವ ಆನಂದ್ ಸಿಂಗ್, ಎಲ್ಲ ಸದಸ್ಯರಿಗೆ ಸಿಡಿ ಕೊಡುತ್ತೇವೆ ಎಂದು ಗೊಂದಲಕ್ಕೆ ತೆರೆ ಎಳೆದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇಂತಹ ಸಮಸ್ಯೆ ಆಗೋದನ್ನ ತಡೆಯೋಕೆ ಪೇಪರ್ ಲೆಸ್ ಅಧಿವೇಶನ ಮಾಡಬೇಕು. ಇದರಿಂದ ಸಮಯ ಉಳಿಯುತ್ತೆ. ಸದಸ್ಯರಿಗೂ ಬೇಗ ಉತ್ತರ ಸಿಗುತ್ತದೆ. ಹಿಮಾಚಲ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯದಲ್ಲಿ ಈಗಾಗಲೇ ಪೇಪರ್ ಲೆಸ್ ಮಾಡಿವೆ. ರಾಜ್ಯದಲ್ಲೂ ಪೇಪರ್ ಲೆಸ್ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಪೇಪರ್ ನಿಂದಾಗಿ ಲಕ್ಷಾಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಅನೇಕ ಬಾರಿ ಪೇಪರ್ ಲೆಸ್ ಅಧಿವೇಶನದ ಕೂಗು ಕೇಳಿ ಬಂದಿತ್ತು. ಹೀಗಾಗಿ ವಿಧಾನ ಪರಿಷತ್ ಅಧಿವೇಶನ ವೇಳೆ ಸಚಿವ ಸುರೇಶ್ ಕುಮಾರ್ ಇಂದು ಮತ್ತೆ ಪೇಪರ್ ಲೆಸ್ ವಿಷಯ ಪ್ರಸ್ತಾಪ ಮಾಡಿದರು.