ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

Public TV
2 Min Read

-ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ಗಿಫ್ಟ್ ನೀಡ್ತಿದ್ದ ಉದ್ಯಮಿ

ಸೂರತ್: ತನ್ನ ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ನೀಡುವ ಮೂಲಕ ಹೆಸರುವಾಸಿಯಾಗಿರುವ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ ತಮ್ಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಾವಿರಾರು ಕೋಟಿ ಗಳಿಸಿದ್ದರೂ ತಮ್ಮ ಸ್ವಂತ ಊರನ್ನು ಮರೆಯದ ಉದ್ಯಮಿ ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಮ್ರೇಲಿ ಜಿಲ್ಲೆಯ ಧೂದಲ್ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದು, ಕೆರೆ ನಿರ್ಮಾಣಗಳ ಕಾರ್ಯ ನಡೆದಿದೆ.

ತಾಯಿಯ ಪ್ರೇರಣೆ: ಮಹಿಳೆಯರಿಗೆ ವಜ್ರ, ವಜ್ರಾಭರಣಗಳು ಅಂದ್ರೆ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಡೊಲಕಿಯಾ ಅವರ ತಾಯಿ ಎಂದೂ ವಜ್ರಗಳನ್ನು ಇಷ್ಟಪಟ್ಟಿಲ್ಲ. ತನ್ನೂರಿನ ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬ ಆಸೆಯನ್ನು ಹೊಂದಿದ್ದರು. ತಾಯಿಯ ಆಸೆಯನ್ನು ಪೂರ್ಣಗೊಳಿಸಲು ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಬಾಲ್ಯದಿಂದ ತಾಯಿ ಮೋಡಗಳಲ್ಲಿ ಮಳೆ ಸುರಿಸುವಂತೆ ಪ್ರಾರ್ಥಿಸುತ್ತಿರೋದನ್ನು ಡೊಲಕಿಯಾ ನೋಡಿದ್ದರು.

ಆರು ಸಾವಿರ ಕೋಟಿಯ ಮಾಲೀಕರಾಗಿರುವ ಡೊಲಕಿಯಾ ಅವರು ಬರಗಾಲ ಹಿನ್ನೆಲೆಯಲ್ಲಿ ಗ್ರಾಮ ತೊರೆದು ಸೂರತ್ ಸೇರಿಕೊಂಡಿದ್ದರು. ಅಂದಿನಿಂದ ಸತತ ಪರಿಶ್ರಮದಿಂದ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ.

ತಾಯಿಯ ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಿದ್ದರಿಂದ ಗ್ರಾಮಕ್ಕೆ ಹಿಂದಿರುಗಿದ್ದೇನೆ. 15 ವರ್ಷದ ಹಿಂದೆ ಗುಜರಾತಿನ ಜಲ ಸಮಸ್ಯೆ ನಿವಾರಣೆಗಾಗಿ ಟ್ರಸ್ಟ್ ಒಂದಕ್ಕೆ 33 ಲಕ್ಷ ರೂ. ದೇಣಿಗೆ ನೀಡಿದ್ದೆ. ಈ ರೀತಿ ದೇಣಿಗೆ ನೀಡುವದರಿಂದ ನೀರಿನ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂಬುವುದು ನನಗೆ ಮನವರಿಕೆ ಆಯ್ತು. ಬರಗಾಲ ಪೀಡಿತ ಪ್ರದೇಶದಲ್ಲಿ ಕೆರೆಗಳ ನಿರ್ಮಾಣ ಮತ್ತು ಪುನಶ್ಚೇತನಕ್ಕೆ ಮುಂದಾದೆ. ಆರಂಭದಲ್ಲಿ ನನ್ನೂರಿನ ಗ್ರಾಮಕ್ಕೆ 5 ಕೋಟಿ ರೂ. ವೆಚ್ಚದಲ್ಲಿ 5 ಕೆರಗಳ ನಿರ್ಮಾಣ ಮಾಡಲಾಯ್ತು. ಕೆರೆಗಳ ನಿರ್ಮಾಣದಿಂದ ಗ್ರಾಮದ ಬಹುತೇಕ ಸಮಸ್ಯೆಗಳು ದೂರು ಆಯ್ತು. ಆರಂಭದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ, ಇದೀಗ ನಮ್ಮ ಕೆಲಸದ ಪ್ರತಿಫಲ ನಮ್ಮ ಮುಂದಿದೆ ಎಂದು ಸಾವಜಿ ಡೊಲಕಿಯಾ ಸಂತೋಷ ವ್ಯಕ್ತಪಡಿಸುತ್ತಾರೆ.

ಸಾವಜಿ ಡೊಲಕಿಯಾ ಫೌಂಡೇಶನ್ ಅಡಿಯಲ್ಲಿ ಇನ್ನುಳಿದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ದಿಟ್ಟ ಹೆಜ್ಜೆಯನ್ನು ಇರಿಸಿದ್ದಾರೆ. ಫೌಂಡೇಶನ್ ವತಿಯಿಂದ ಆಯ್ದ ಗ್ರಾಮಗಳಿಗೆ ತಲಾ 25 ಲಕ್ಷ ರೂ. ನೀಡಲಾಗಿದೆ. ಗ್ರಾಮಸ್ಥರು ಸಹ ಸ್ವಇಚ್ಛೆಯಿಂದ ಕೆಲಸದಲ್ಲಿ ಭಾಗಿಯಾಗುತ್ತಿರೋದು ಖುಷಿ ತಂದಿದೆ. 45 ಕೆರೆಗಳ ನಿರ್ಮಾಣದಲ್ಲಿ 2,500ಕ್ಕೂ ಹೆಚ್ಚು ಜನರು ನಮ್ಮ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ಡೊಲಕಿಯಾ ಹೇಳುತ್ತಾರೆ.

ತಮ್ಮ ಗ್ರಾಮದಲ್ಲಿ ಸೇರಿದಂತೆ ಒಟ್ಟು 45 ಕೆರೆಗಳ ನಿರ್ಮಾಣ ಕಾರ್ಯವನ್ನು ಡೊಲಕಿಯಾ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ 70 ಕೆರೆಗಳ ನಿರ್ಮಾಣದ ಗುರಿಯನ್ನು ಡೊಲಕಿಯಾ ಹೊಂದಿದ್ದಾರೆ.

ಹರಿಕೃಷ್ಣ ಎಕ್ಸ್ ಪೋರ್ಟ್  ಕಂಪನಿಯ ಮಾಲೀಕರಾಗಿರುವ ಸಾವಜಿ ಡೊಲಕಿಯಾ 2018ರ ದೀಪಾವಳಿ ಸಂದರ್ಭದಲ್ಲಿ ಬೋನಸ್ ರೂಪದಲ್ಲಿ ತಮ್ಮ ನೌಕರರಿಗೆ 600 ಕಾರು ಮತ್ತು 900 ಜನರಿಗೆ ಎಫ್‍ಡಿ ನೀಡಿದ್ದರು. ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂ. ವ್ಯಯಿಸಲಾಗಿತ್ತು.

600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಬೋನಸ್ ರೂಪದಲ್ಲಿ ಲಭ್ಯವಾಗಿತ್ತು. ಹಬ್ಬದ ದಿನದಂದು 6,000 ಸಾವಿರ ಜನರಿಗೆ ಔತಣಕೂಟವನ್ನು ಸಹ ಏರ್ಪಡಿಸಲಾಗಿತ್ತು. 2018ರ ವೇಳೆ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ದೆಹಲಿ ಶಾಖೆಯ ಮೂವರಿಗೆ ಬೆಂಜ್ ಕಾರ್ ಉಡುಗೊರೆಯಾಗಿ ನೀಡಿದ್ದರು. 2011ರಿಂದಲೂ ಡೊಲಕಿಯಾವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಬೋನಸ್ ನೀಡಲು ಪ್ರಾರಂಭಿಸಿದ್ದಾರೆ. 2015ರಲ್ಲಿ ಹಬ್ಬದ ಪ್ರಯುಕ್ತ 491 ಕಾರ್ ಮತ್ತು 200 ಫ್ಲ್ಯಾಟ್‍ಗಳನ್ನು ಗಿಫ್ಟ್ ನೀಡಿದ್ದರು. 2014ರಲ್ಲಿ ಕಂಪನಿಯ ನೌಕರರಿಗೆ 50 ಕೋಟಿ ರೂ. ಹಂಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *