ಅಂಕೋಲ ಪುರಸಭೆ ಆಡಳಿತಾಧಿಕಾರಿ ಮರು ನಿಯೋಜನೆ ಮಾಡಿದರೆ ಸಾಮೂಹಿಕ ರಾಜೀನಾಮೆ: ಪುರಸಭೆ ಅಧ್ಯಕ್ಷ

Public TV
2 Min Read

ಕಾರವಾರ: ಆಡಳಿತ ದುರುಪಯೋಗ ಹಾಗೂ ಭ್ರಷ್ಟಾಚಾರ ಆರೋಪ ಹೊತ್ತು ಅಮಾನತಾಗಿದ್ದ ಅಂಕೋಲದ ಪುರಸಭೆ ಕಮಿಷಿನರ್ ಹಾಗೂ ಮುಖ್ಯ ಇಂಜಿನಿಯರ್‌ರನ್ನು ಮರು ನೇಮಕ ಮಾಡಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಅಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅಂಕೋಲ ಪುರಸಭೆ ಅಧ್ಯಕ್ಷ ಸೂರಜ್ ಎಂ.ನಾಯ್ಕ, ಪುರಸಭೆಯ ಈ ಹಿಂದಿನ ಮುಖ್ಯಾಧಿಕಾರಿ ಹೆಚ್.ಅಕ್ಷತಾ ಹಾಗೂ ಕಿರಿಯ ಅಭಿಯಂತರರಾದ ಶಲ್ಯಾ ನಾಯ್ಕ ಅವರು ಹಿಂದಿನಿಂದಲೂ ಆಡಳಿತ ಮಂಡಳಿಯ ಗಮನಕ್ಕೆ ತರದೇ ಹಲವು ಕಾನೂನು ಬಾಹಿರವಾಗಿ ಕರ್ತವ್ಯವನ್ನು ನಿರ್ವಹಿಸಿ, ಕರ್ತವ್ಯಲೋಪ ಎಸಗಿದ್ದರಿಂದ ಜಿಲ್ಲಾಧಿಕಾರಿ ಅವರು ಪ್ರಾಥಮಿಕ ತನಿಖೆ ನಡೆಸಿ ಕಾರಣ ಕೇಳಿ ನೋಟಿಸ್ ನೀಡಿ ಸಾಕಷ್ಟು ಕಾಲಾವಕಾಶ ನೀಡಿದ ನಂತರ ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಆದರೆ ಅಮಾನತು ಆದ ಅಧಿಕಾರಿಗಳು ನ್ಯಾಯಾಲದ ಮೊರೆ ಹೋಗಿ ಆದೇಶಕ್ಕೆ ತಡೆ ತಂದಿದ್ದು ಇರುತ್ತದೆ. ಆದರೆ, ನ್ಯಾಯಾಲಯ ಅಮಾನತು ಆದ ಸ್ಥಳದಲ್ಲಿಯೇ ಮರುನಿಯೋಜನೆ ಮಾಡಬೇಕು ಎನ್ನುವ ಕುರಿತು ಸ್ಪಷ್ಟತೆ ನೀಡಿಲ್ಲ. ಇದು ಕೇವಲ ಮಧ್ಯಂತರ ಆದೇಶವಾಗಿದೆ. ಯಾವುದೇ ಅಧಿಕಾರಿಯೂ ಕರ್ತವ್ಯಲೋಪ ಎಸಗಿ ಅದೇ ಸ್ಥಳದಲ್ಲಿ ಮುಂದುವರಿದರೆ ಸಾಕ್ಷ್ಯನಾಶ ಅಥವಾ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಅಮಾನತು ಮಡಲಾಗುತ್ತದೆ.

ಹೀಗಿರುವಾಗ ಈಗಾಗಲೇ ಅಮಾನತು ಆದೇಶದ ನಂತರ ಅಂಕೋಲಾ ಪುರಸಭೆಗೆ ಪ್ರಭಾರಿ ಮುಖ್ಯಾಧಿಕಾರಿಯನ್ನು ಸಹ ನಿಯೋಜನೆ ಮಾಡಲಾಗಿದ್ದು, ಉತ್ತಮ ಆಡಳಿತಕ್ಕೆ ಕಾರಣವಾಗಿದೆ. ಹೀಗಿದ್ದು ಹಿಂದಿನ ಮುಖ್ಯಾಧಿಕಾರಿ ಹೆಚ್.ಆಕ್ಷತಾ ಅವರನ್ನು ಮರುನಿಯೋಜಿಸಿದರೆ ಅವರ ಮೇಲಿನ ಆರೋಪಗಳು ಕಚೇರಿಯ ದಾಖಲೆಗೆ ಸಂಬಂಧಿಸಿದ್ದು ಆದ್ದರಿಂದ ಸಾಕ್ಷ್ಯನಾಶಕ್ಕೆ ಕಾರಣವಾಗಬಹುದು. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರ ಹಣ ದುರೋಪಯೋಗಕ್ಕೆ ಆಡಳಿತವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ, ನಮ್ಮ ಪುರಸಭೆಯ ಸಾರ್ವಜನಿಕ ಹಿತಾಸಕ್ತಿಯಿಂದ ಹಿಂದಿನ ಮುಖ್ಯಾಧಿಕಾರಿ ಹೆಚ್.ಅಕ್ಷತಾ ಅವರನ್ನು ಮರುನಿಯೋಜನೆ ಮಾಡಿದಲ್ಲಿ ಪುರಸಭೆಯ 23 ಸದಸ್ಯರ ಪೈಕಿ 19 ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದು, ಸಾಮೂಹಿಕ ರಾಜೀನಾಮೆ ಪತ್ರವನ್ನು ಈಗಾಗಲೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪೌರಾಡಳಿತ ಇಲಾಖೆಯ ಸಚಿವರು, ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವರು, ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

Share This Article