ಪರ್ಮಿಟ್ ಇಲ್ಲದಿದ್ದರೂ ಅಪಘಾತದ ಪರಿಹಾರವನ್ನು ವಿಮಾ ಸಂಸ್ಥೆಯೇ ಪಾವತಿಸಬೇಕು: ಸುಪ್ರೀಂ ಕೋರ್ಟ್

Public TV
2 Min Read

ನವದೆಹಲಿ: ಅಪಘಾತಕ್ಕೀಡಾದ ವಾಹನಕ್ಕೆ ಪರ್ಮಿಟ್ ಇಲ್ಲದಿದ್ದರೂ ವಿಮಾ ಸಂಸ್ಥೆಯೇ ಪರಿಹಾರದ ಮೊತ್ತವನ್ನು ಪಾವತಿಸಬೇಕೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

2009ರಲ್ಲಿ ಬೆಂಗಳೂರಿನಲ್ಲಿ ನಡೆದ ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಮೃತ ಕುಟುಂಬಕ್ಕೆ ವಿಮಾ ಕಂಪೆನಿಯೇ ಪರಿಹಾರ ನೀಡಬೇಕೆಂದು ನೀಡಿದ್ದ ಸ್ಥಳೀಯ ನ್ಯಾಯಾಲಯದ ತೀರ್ಪಿಗೆ ವಿಮಾ ಸಂಸ್ಥೆಯವರು ಸುಪ್ರೀಂ ಕೋರ್ಟ್ ಮೊರೆಹೊಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ ನೇತೃತ್ವದ ತ್ರಿ-ಸದಸ್ಯ ಪೀಠವು, ಪರ್ಮಿಟ್ (ರಸ್ತೆ ರಹದಾರಿ) ಇಲ್ಲದೆ ಸಂಚರಿಸುತ್ತಿರುವ ವಾಹನಗಳಿಂದ ಅಪಘಾತ ಸಂಭವಿಸಿದಾಗ, ಅಪಘಾತದಿಂದಾಗಿ ವ್ಯಕ್ತಿಯು ಸಾವನ್ನಪ್ಪಿದ್ದಲ್ಲಿ ಅಥವಾ ಗಾಯಗೊಂಡಿರುವ ಸಂತ್ರಸ್ತರಿಗೆ ವಿಮಾ ಕಂಪೆನಿಗಳೆ ಪರಿಹಾರ ನೀಡಬೇಕು ಹಾಗೂ ಪರಿಹಾರದ ಮೊತ್ತವನ್ನು ವಿಮಾ ಕಂಪೆನಿಗಳು ವಾಹನದ ಮಾಲೀಕರಿಂದ ವಸೂಲಿ ಮಾಡಬೇಕೆಂದು ವಿಮಾ ಸಂಸ್ಥೆಗೆ ಆದೇಶ ನೀಡಿದೆ.

ಏನಿದು ಪ್ರಕರಣ?
2009ರ ಮಾರ್ಚ್ 17 ರಂದು ಬೆಂಗಳೂರು ಹೊರವಲಯದ ತುಮಕೂರು ರಸ್ತೆಯಲ್ಲಿ ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಬೈಕ್ ಚಲಾಯಿಸುತ್ತಿದ್ದ ಸವಾರ ಸತೀಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂಬದಿ ಸವಾರ ಆನಂದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯವು ಮೃತರ ಕುಟುಂಬಕ್ಕೆ 4.53 ಲಕ್ಷ ಮತ್ತು ಗಾಯಾಳುವಿಗೆ 1.72 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತ್ತು.

ಸ್ಥಳೀಯ ನ್ಯಾಯಾಲಯದ ತೀರ್ಪಿಗೆ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ ಆಕ್ಷೇಪ ವ್ಯಕ್ತಪಡಿಸಿ, ಲಾರಿಗೆ ರಹದಾರಿ ಇಲ್ಲದ ಕಾರಣ ನಾವು ಪರಿಹಾರ ಕೊಡುವುದಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ನಲ್ಲಿ ತನ್ನ ವಾದ ಮಂಡಿಸಿದ್ದ ವಿಮಾ ಕಂಪೆನಿ, ಸಂತ್ರಸ್ತರಿಗೆ ನಾವು ಪರಿಹಾರ ನೀಡಿ, ನಂತರ ಅದನ್ನು ಲಾರಿ ಮಾಲೀಕರಿಂದ ವಸೂಲಿ ಮಾಡಲು ಸಾಧ್ಯವಿಲ್ಲ. ರಹದಾರಿ ಇಲ್ಲದ ಕಾರಣ ಲಾರಿ ಮತ್ತು ಅದರ ಮಾಲೀಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಹಾರವನ್ನು ಲಾರಿ ಮಾಲೀಕರೇ ಪಾವತಿ ಮಾಡಬೇಕು ಎಂದು ಕಂಪೆನಿ ವಾದಿಸಿತ್ತು. ವಿಮಾ ಕಂಪೆನಿಯ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿ, ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನು 16 ಲಕ್ಷ ರೂ.ಗೆ ಏರಿಸಿ ತೀರ್ಪು ನೀಡಿತ್ತು.

ಮೃತ ಕುಟುಂಬದವರು ಲಾರಿ ಮಾಲೀಕರಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ವಿಮಾ ಕಂಪೆನಿಯಿಂದಲೇ ಅದನ್ನು ಕೊಡಿಸಿ ಎಂದು ಸುಪ್ರೀಂ ಕೋರ್ಟ್‍ಗೆ ಮೊರೆ ಹೊಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *