ಜಡ್ಜ್‌ಗಳ ಮೇಲೆ ಪೂರ್ವಯೋಜಿತ ದಾಳಿ – ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಸುಪ್ರೀಂ ಕೆಂಡಾಮಂಡಲ

3 Min Read

– 10 ಗಂಟೆಗಳ ಕಾಲ ಒತ್ತೆಯಿಟ್ಟಿದ್ದ ಜನ
– ಅತ್ಯಂತ ಧ್ರುವೀಕರಣಗೊಂಡಿರುವ ರಾಜ್ಯ

ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ (Malda) ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ ನಡೆದ ಹಿಂಸಾಚಾರ ಮತ್ತು ನ್ಯಾಯಾಧೀಶರ ಮೇಲಿನ ದಾಳಿಯನ್ನು ಸುಪ್ರೀಂ ಕೋರ್ಟ್ (Supreme Court) ಕಟು ಪದಗಳಿಂದ ಖಂಡಿಸಿದೆ.

ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಪತ್ರ ಬರೆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಇಂದು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತು.

ಪಶ್ಚಿಮ ಬಂಗಾಳ (West Bengal) ಅತ್ಯಂತ ಧ್ರುವೀಕರಣಗೊಂಡಿರುವ ರಾಜ್ಯವಾಗಿದೆ. ನ್ಯಾಯಾಂಗದ ಅಧಿಕಾರಿಗಳನ್ನು ಒತ್ತೆ ಇರಿಸಿಕೊಂಡಿದ್ದು ನ್ಯಾಯಾಂಗದ ಮೇಲೆ ನಡೆದ ವ್ಯವಸ್ಥಿತ ದಾಳಿ. ರಾಜ್ಯದಲ್ಲಿ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ ಆಕ್ರೋಶ ಹೊರಹಾಕಿತು.

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ಘಟನೆಯು ಕೇವಲ ಪ್ರತಿಭಟನೆಯಲ್ಲ, ಬದಲಿಗೆ ನ್ಯಾಯಾಂಗ ಅಧಿಕಾರಿಗಳ ಮನೋಬಲ ಕುಂದಿಸಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ನಡೆಸಿದ ಪೂರ್ವಯೋಜಿತ ಮತ್ತು ಸಂಘಟಿತ ಪ್ರಯತ್ನ ಎಂದು ಅಭಿಪ್ರಾಯಪಟ್ಟು ಚಾಟಿ ಬೀಸಿದೆ.

ಚುನಾವಣಾ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ತಕ್ಷಣವೇ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ರಾಜ್ಯ ಸರ್ಕಾರವು ತನ್ನ ಕರ್ತವ್ಯದಿಂದ ವಿಮುಖವಾಗಿದೆ ಎಂದು ಹೇಳಿದ ಕೋರ್ಟ್ ಅಧಿಕಾರಿಗಳಿಗೆ ರಕ್ಷಣೆ ನೀಡಲು ವಿಫಲರಾಗಿದ್ದಕ್ಕೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಸುಪ್ರೀಂ ಕೋರ್ಟ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಈ ದಾಳಿಯ ಬಗ್ಗೆ ಕೇಂದ್ರೀಯ ತನಿಖಾ ದಳ(CBI) ಅಥವಾ ರಾಷ್ಟ್ರೀಯ ತನಿಖಾ ದಳ(NIA) ಸ್ವತಂತ್ರ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ(Election commission) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.


ಬುಧವಾರ ಏನಾಗಿತ್ತು?
ಮಾಲ್ಡಾ ಜಿಲ್ಲೆಯಲ್ಲಿ ಏಪ್ರಿಲ್‌ 1 ರಂದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿದ್ದ ನ್ಯಾಯಾಂಗ ಅಧಿಕಾರಿಗಳ ಮೇಲೆ ದೊಡ್ಡ ಮಟ್ಟದ ದಾಳಿ ನಡೆದಿತ್ತು. ಮತದಾರರ ಪಟ್ಟಿಯಿಂದ ಕೆಲವು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಕಾರಣಕ್ಕೆ ಸಾವಿರಾರು ಪ್ರತಿಭಟನಾಕಾರರು ಮಾಲ್ಡಾದ ಇಂಗ್ಲಿಷ್ ಬಜಾರ್‌ನಲ್ಲಿರುವ ಕಚೇರಿಯನ್ನು ಮುತ್ತಿಗೆ ಹಾಕಿದರು.

ಮೂವರು ಮಹಿಳಾ ಜಡ್ಜ್‌ ಸೇರಿ ಒಟ್ಟು ಏಳು ನ್ಯಾಯಾಧೀಶರನ್ನು ಪ್ರತಿಭಟನಾಕಾರರು ಸುಮಾರು 10 ಗಂಟೆಗಳ ಕಾಲ ಕಚೇರಿಯೊಳಗೆ ಕೂಡಿಹಾಕಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಸಮಯದಲ್ಲಿ ಅಧಿಕಾರಿಗಳಿಗೆ ಆಹಾರ, ನೀರು ಅಥವಾ ವೈದ್ಯಕೀಯ ನೆರವು ಸಿಗದಂತೆ ತಡೆಯಲಾಗಿತ್ತು. ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು ಎಂದು ವರದಿಯಾಗಿದೆ.

ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಕಚೇರಿಯ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರು. ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದರು.

ಅಧಿಕಾರಿಗಳನ್ನು ಹೊರಬರಲು ಬಿಡದೆ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ವಿನಂತಿಸಿದ್ದರು.

ನ್ಯಾಯಾಧೀಶ ನಿಯೋಜನೆ ಯಾಕೆ?
ಮತದಾರರ ಪಟ್ಟಿಯಲ್ಲಿನ ದೋಷಗಳು ಮತ್ತು ಆಕ್ಷೇಪಣೆಗಳನ್ನು (Logical Discrepancy claims) ಪರಿಶೀಲಿಸಲು ಸುಪ್ರೀಂ ಕೋರ್ಟ್ ಸುಮಾರು 150 ನ್ಯಾಯಾಂಗ ಅಧಿಕಾರಿಗಳನ್ನು (ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು) ನಿಯೋಜಿಸಲು ಸೂಚಿಸಿತ್ತು. ಪಾರದರ್ಶಕತೆ ಕಾಯ್ದುಕೊಳ್ಳಲು ಜಾರ್ಖಂಡ್ ಮತ್ತು ಒಡಿಶಾದಿಂದ ಸುಮಾರು 200 ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

Share This Article