ದೆಹಲಿ: ಕಾವೇರಿ ಸ್ಕೀಂ ಹಿನ್ನೆಲೆಯಲ್ಲಿ ಕೇಂದ್ರ ಸಲ್ಲಿಸಿರುವ ಕರಡು ಅಫಿಡವಿಟ್ ನಲ್ಲಿ ಕೆಲ ಬದಲಾವಣೆ ಮಾಡಿ, ಗುರುವಾರವೇ ಸಲ್ಲಿಸಿ ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸುಪ್ರೀಂ ಸೂಚನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕಾವೇರಿ ಸ್ಕೀಂ ರಚನೆಯ ಕುರಿತ ಕರಡು ಅಫಿಡವಿಟ್ ಸಲ್ಲಿಸಿತ್ತು. ಕೇಂದ್ರ ಸಲ್ಲಿಸಿದ್ದ ಕರಡು ಅಫಿಡವಿಟ್ ಗೆ ರಾಜ್ಯಗಳ ಒಪ್ಪಿಗೆ ಕುರಿತು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಅಫಿಡವಿಟ್ ನಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಸೂಚಿಸಿ ನಾಳೆಯೇ ಮರು ಸಲ್ಲಿಸುವಂತೆ ಆದೇಶ ನೀಡಿದೆ.
ಸದ್ಯ ಸುಪ್ರೀಂ ಸೂಚನೆಗೆ ಕೇಂದ್ರ ಒಪ್ಪಿಕೊಂಡಿದೆ ನೀಡಿದೆ. ಇನ್ನು, ನೀರು ಹಂಚಿಕೆ ಸಂಬಂಧ ರಾಜ್ಯಗಳಿಗೆ ಸೂಚನೆ ನೀಡುವಂತಿಲ್ಲ. ಕೇವಲ ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆ ನೀಡಬಹುದು ಅಷ್ಟೇ ಎಂದು ಸುಪ್ರೀಂ ತಿಳಿಸಿದೆ.
ವಿಚಾರಣೆಯ ವೇಳೆ ಕೇಂದ್ರ ಸಲ್ಲಿಸಿರುವ ಸ್ಕೀಂ ಕರಡು ಪ್ರತಿಯ ಕೆಲ ಅಂಶಗಳ ಕುರಿತು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು. ಕಾವೇರಿ ನೀರು ನಿರ್ವಹಣಾ ಮಂಡಳಿಯೇ ಆಗಬೇಕೆಂದು ತಮಿಳು ನಾಡು ಸರ್ಕಾರ ಇಂದು ಸಹ ವಾದ ಮಂಡಿಸಿತು. ಜೊತೆಗೆ ಪ್ರಾಧಿಕಾರದ ಕಚೇರಿ ಬೆಂಗಳೂರಿನಲ್ಲಿ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ವಿರೋಧಿಸಿತು. ಅಲ್ಲದೇ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡವ ಬದಲು ದೆಹಲಿಯಲ್ಲೇ ಸ್ಥಾಪಿಸಲು ಮನವಿ ಮಾಡಿದೆ. ತಮಿಳುನಾಡು ಮನವಿಗೆ ಸುಪ್ರೀಂ ಖಡಕ್ ಉತ್ತರ ನೀಡಿದ್ದು, ಕಾವೇರಿ ವಿಚಾರದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಪ್ರಾಧಿಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಕರ್ನಾಟಕದ ವಕೀಲರು ರಾಜ್ಯದಲ್ಲಿ ಹೊಸ ಸರ್ಕಾರದ ರಚನೆ ನಡೆಯುತ್ತಿದೆ. ಹೀಗಾಗಿ ಈಗ ಕಾವೇರಿ ಸ್ಕೀಂ ವಿಷಯದ ಬಗ್ಗೆ ತೀರ್ಮಾನ ಬೇಡ. ಜುಲೈವರೆಗೂ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಆದರೆ ಕರ್ನಾಟಕದ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಗುರುವಾರದ ಒಳಗಡೆ ಅಂತಿಮ ನಿರ್ಧಾರ ಮಾಡಬೇಕು ಸೂಚಿಸಿ ವಿಚಾರಣೆ ಮುಂದೂಡಿತು.