– ವಕ್ಫ್ ಸದಸ್ಯರಾಗಲು 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕೆಂಬ ಷರತ್ತಿಗೆ ತಡೆ
– ವಕ್ಫ್ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದವರೇ ಬಹುಸಂಖ್ಯಾತರಿರಬೇಕು
ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಕೆಲವೊಂದು ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ (Supreme Court) ಇಂದು ತಡೆ ನೀಡಿದೆ. ಕೆಲ ಅಂಶಗಳ ಬದಲಾವಣೆಗೆ ಸೂಚಿಸಿರುವ ಕೋರ್ಟ್, ಸಂಪೂರ್ಣವಾಗಿ ಕಾಯ್ದೆಗೆ ತಡೆ ನೀಡಲು ಸಾರಾಸಗಟಾಗಿ ನಿರಾಕರಿಸಿದೆ.
ವಕ್ಫ್ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಆ ಅರ್ಜಿಗಳಲ್ಲಿ, ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Amendment Act) ಕೇಂದ್ರ ಸರ್ಕಾರ ತೀವ್ರ ವಿರೋಧದ ನಡುವೆಯೂ ಜಾರಿಗೊಳಿಸಿದೆ. ಹಾಗಾಗಿ, ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಸಂಪೂರ್ಣ ಕಾಯ್ದೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ, ಕಾನೂನಿನ ಕೆಲವು ನಿಬಂಧನೆಗಳಿಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಇದ್ದ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.
ವಕ್ಫ್ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ರೆ, ಮೂರು ವಿಚಾರಗಳಿಗೆ ಅರ್ಜಿದಾರರು ತಡೆಕೋರಿ ಸಲ್ಲಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಇದನ್ನೂ ಓದಿ: ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?
ಯಾವುದೇ ಒಬ್ಬ ವ್ಯಕ್ತಿ ವಕ್ಫ್ ಮಂಡಳಿಯ (Waqf Board) ಸದಸ್ಯರಾಗಲು ಅಥವಾ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಕನಿಷ್ಠ 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಧ್ಯಂತರ ಆದೇಶದಲ್ಲಿ ಯಾವುದಕ್ಕೆ ತಡೆ!?
ತಕರಾರು-1
ಜಿಲ್ಲಾಧಿಕಾರಿಗೆ ಅಥವಾ ಸರ್ಕಾರ ನಿಯೋಜಿಸಿದ ಅಧಿಕಾರಿಗೆ ಆಸ್ತಿಯನ್ನು ವಕ್ಫ್ ಆಗಿ ಗುರುತಿಸುವ ಅಧಿಕಾರ ನೀಡುವ ನಿಬಂಧನೆ
ಕೋರ್ಟ್ ಸಲಹೆ; ಕಾರ್ಯನಿರ್ವಾಹಕ ಅಧಿಕಾರಿಯು ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಣಯಿಸಲು ಅನುಮತಿಸಲಾಗುವುದಿಲ್ಲ. ಇದು ಅಧಿಕಾರಗಳ ಪ್ರತ್ಯೇಕತೆ ಉಲ್ಲಂಘಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವಕ್ಫ್ ಆಸ್ತಿಯು ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿದೆಯೇ ಎಂಬ ವಿವಾದ ನಿರ್ಧರಿಸಲು ಸರ್ಕಾರದ ನಿಯೋಜಿತ ಅಧಿಕಾರಿಗೆ ಅವಕಾಶ ನೀಡುವ ನಿಬಂಧನೆ ತಡೆಹಿಡಿಯಲಾಗಿದೆ. ನ್ಯಾಯಾಧೀಕರಣ ಒಂದು ವಿಷಯದ ಬಗ್ಗೆ ಅಂತಿಮ ತೀರ್ಪು ಅಥವಾ ನಿರ್ಧಾರ ನೀಡುವವರೆಗೆ, ಆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ 3ನೇ ವ್ಯಕ್ತಿ ಯಾವುದೇ ಹಕ್ಕುಗಳನ್ನು ಸ್ಥಾಪಿಸಲು ಅಥವಾ ದಾವೆ ಹೂಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತಕರಾರು-2
ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಯಾವ ವ್ಯಕ್ತಿಯು ಕನಿಷ್ಟ 5 ವರ್ಷದಿಂದ ಇಸ್ಲಾಂ ಧರ್ಮ ಪಾಲಿಸುತ್ತಿದ್ದಾನೋ ಆ ವ್ಯಕ್ತಿ ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಅರ್ಹ ಎಂಬ ಷರತ್ತು
ಕೋರ್ಟ್ ಸಲಹೆ: ಈ ಷರತ್ತಿಗೆ ಸದ್ಯಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಈ ಷರತ್ತು ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಕರಾರು-3
ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡುವ ನಿಬಂಧನೆಗೆ ತಕರಾರು
ಕೋರ್ಟ್ ಸಲಹೆ: ಕೋರ್ಟ್ ಈ ನಿಬಂಧನೆಗೆ ತಡೆ ನೀಡಿಲ್ಲ. ಆದರೂ, ಸಾಧ್ಯವಾದಷ್ಟು ಮಟ್ಟಿಗೆ, ಮಂಡಳಿಯ ಪದನಿಮಿತ್ತ ಸದಸ್ಯರು ಮುಸ್ಲಿಂ ವ್ಯಕ್ತಿಯಾಗಿರಬೇಕು ಎಂದು ಕೋರ್ಟ್ ಹೇಳಿದೆ. ಕೇಂದ್ರ ವಕ್ಫ್ ಮಂಡಳಿಯಲ್ಲಿ 4 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಬಾರದು, ರಾಜ್ಯ ವಕ್ಫ್ ಮಂಡಳಿ 3 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಒಳಗೊಂಡಿರಬಾರದು. ಸಾಧ್ಯವಾದಷ್ಟು ಮಟ್ಟಿಗೆ ಮಂಡಳಿಯ ಸಿಇಒ ಮುಸ್ಲಿಮರಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆಯಲ್ಲದೇ ವಕ್ಫ್ ಕಾಯ್ದೆಯ ಸಿಂಧುತ್ವದ ಬಗ್ಗೆ ತನ್ನ ಆದೇಶವು ಅಂತಿಮ ಅಭಿಪ್ರಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತಕರಾರು-4
ಎಲ್ಲ ವಕ್ಫ್ ಆಸ್ತಿಗಳನ್ನು ಕಾಯ್ದೆಯಡಿ ನೋಂದಣಿ ಕಡ್ಡಾಯ ನಿಬಂಧನೆ
ಕೋರ್ಟ್ ಸಲಹೆ: ಈ ನಿಬಂಧನೆಯಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಿಲ್ಲ. ಇದು ಹೊಸ ನಿಯಮ ಅಲ್ಲ ಎಂದು ಕೋರ್ಟ್ ಹೇಳಿದೆ. ಏಕೆಂದರೆ, ಈ ಷರತ್ತು 1995 ಮತ್ತು 2013ರ ಹಿಂದಿನ ಕಾಯ್ದೆಗಳಲ್ಲಿಯೂ ಇತ್ತು. ಆದರೂ, ಕೋರ್ಟ್ ನೋಂದಣಿಗೆ ಸಮಯ ಮಿತಿಯನ್ನು ವಿಸ್ತರಿಸಿದೆ.
ಅರ್ಜಿದಾರರು ಯಾರು?
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ದೆಹಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್, ನಾಗರಿಕ ಹಕ್ಕುಗಳ ರಕ್ಷಣಾ ಸಂಘ, ಜಮಾತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ, ಸಮಸ್ತ ಕೇರಳ ಜಮಿಯತ್ ಉಲೇಮಾ, ಅಂಜುಮ್ ಕದರಿ, ತೈಯಬ್ ಖಾನ್ ಸಲ್ಮಾನಿ, ಮೊಹಮ್ಮದ್ ಶಫಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ, ಎಸ್‌ಪಿ ಸಂಸದ ಜಿಯಾ ಉರ್ ರೆಹಮಾನ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಡಿಎಂಕೆ ಇತರರು.
ಕಾಯ್ದೆ ಬೆಂಬಲಿಸಿ ಸುಪ್ರೀಂಕೋರ್ಟ್‌ಗೆ ಹೋದವರು ಯಾರು?
ಬಿಜೆಪಿ ಸರ್ಕಾರಗಳಿರುವ ಅಸ್ಸಾಂ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು. ಕೇರಳ ರಾಜ್ಯ ಸರ್ಕಾರ ಕೂಡ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿತ್ತು.