SC/ST ಬಡ್ತಿ ಮೀಸಲಾತಿ: ಮಾನದಂಡ ರೂಪಿಸಲು ಸುಪ್ರೀಂ ನಿರಾಕರಣೆ

Public TV
2 Min Read

ನವದೆಹಲಿ: ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿ ನೀಡುವಾಗ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ನೌಕರರಿಗೆ ಮೀಸಲಾತಿ ನಿರ್ಧರಿಸಲು ಯಾವುದೇ ಮಾನದಂಡವನ್ನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌, ಸಂಜೀವ್‌ ಖನ್ನಾ ಹಾಗೂ ಬಿ.ಆರ್‌.ಗವಾಯಿ ಅವರಿರುವ ನ್ಯಾಯಪೀಠವು ಎಸ್‌ಸಿ/ಎಸ್‌ಟಿ ಬಡ್ತಿ ಮೀಸಲಾತಿ ಕುರಿತು ಇಂದು ತೀರ್ಪು ಪ್ರಕಟಿಸಿತು. ಬಡ್ತಿಯಲ್ಲಿ ಮೀಸಲಾತಿ ಜಾರಿಗೊಳಿಸುವಾಗ ಎಸ್‌ಸಿ/ಎಸ್‌ಟಿ ಜನರ ಪ್ರಾತಿನಿಧ್ಯವನ್ನು ನಿರ್ಧರಿಸುವ ಕೇಂದ್ರ ಮತ್ತು ರಾಜ್ಯಗಳಿಂದ ಪ್ರಮಾಣೀಕರಿಸಬಹುದಾದ ದತ್ತಾಂಶವನ್ನು ಸಂಗ್ರಹಿಸುವ ಅಗತ್ಯವನ್ನು ತೆಗೆದುಹಾಕುವ ಕೇಂದ್ರದ ಮನವಿಯನ್ನು ಸುಪ್ರೀಂ ತಿರಸ್ಕರಿಸಿದೆ. ಇದನ್ನೂ ಓದಿ: ಸಮಾಜವಾದಿ ಪಕ್ಷದವರು ಜಿನ್ನಾನ ಆರಾಧಕರು: ಯೋಗಿ ಆದಿತ್ಯನಾಥ್‌ ಟೀಕೆ

ಪ್ರಾತಿನಿಧ್ಯದ ಅಸಮರ್ಪಕತೆಯನ್ನು ನಿರ್ಧರಿಸಲು ನಾವು ಯಾವುದೇ ಅಳತೆಗೋಲನ್ನು ರೂಪಿಸಲು ಸಾಧ್ಯವಿಲ್ಲ. ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಪ್ರಮಾಣೀಕರಿಸಬಹುದಾದ ಡೇಟಾವನ್ನು ಸಂಗ್ರಹಿಸುವುದು ಸಂಬಂಧಪಟ್ಟ ರಾಜ್ಯಗಳ ಹೊಣೆಗಾರಿಕೆ. ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ನಿರ್ಧರಿಸುವುದಕ್ಕಾಗಿ ಮಾನದಂಡ ನಿರ್ಣಯಿಸಲು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದೇವೆ ಎಂದು ನ್ಯಾಯಾಲಯ ತಿಳಿಸಿದೆ.

ಎಂ.ನಾಗರಾಜ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ 2006ರ ತೀರ್ಪಿನ ಅನ್ವಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯದ ಕುರಿತು ನಿರ್ಧರಣಾತ್ಮಕ ದತ್ತಾಂಶ ಸಂಗ್ರಹಿಸುವುದು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಎಂದು ಪೀಠ ಒತ್ತಿ ಹೇಳಿದೆ.

ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳ ಬಡ್ತಿ ಮೀಸಲಾತಿ ಷರತ್ತುಗಳನ್ನು ದುರ್ಬಲಗೊಳಿಸಬೇಡಿ. ಮೀಸಲಾತಿ ನೀಡುವ ಮುನ್ನ ರಾಜ್ಯವು ಪರಿಮಾಣಾತ್ಮಕ ಡೇಟಾ ಸಂಗ್ರಹಿಸಬೇಕು. ಪ್ರಾತಿನಿಧ್ಯದ ಅಸಮರ್ಪಕತೆಯ ಮೌಲ್ಯಮಾಪನದ ಜೊತೆಗೆ ಪರಿಮಾಣಾತ್ಮಕ ದತ್ತಾಂಶ ಸಂಗ್ರಹವೂ ಅತ್ಯಗತ್ಯ. ಮೀಸಲಾತಿ ನೀಡುವ ಮುನ್ನ ಉನ್ನತ ಹುದ್ದೆಗಳ ಪ್ರಾತಿನಿಧ್ಯದ ಮಾಹಿತಿ ಸಂಗ್ರಹ ಅಗತ್ಯ. ಪ್ರಾತಿನಿಧ್ಯವನ್ನು ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಮಾಡಬೇಕು. ಅವಧಿ ಎಷ್ಟು ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದನ್ನೂ ಓದಿ: ಅಮಾನತು ಆದೇಶ ರದ್ದು – ಮಹಾರಾಷ್ಟ್ರದ 12 ಬಿಜೆಪಿ ಶಾಸಕರಿಗೆ ಗೆಲುವು

ಬಡ್ತಿ ಮೀಸಲಾತಿ ಕುರಿತು ಹಳೆಯ ಪ್ರಕರಣ ಪರಿಶೀಲಿಸುವುದಿಲ್ಲ. ಬಡ್ತಿ ಮೀಸಲಾತಿ ಜಾರಿ ಬಗ್ಗೆ ರಾಜ್ಯಗಳು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

2021ರ ಅಕ್ಟೋಬರ್ 26ರಂದು ಕಾಯ್ದಿರಿಸಿದ್ದ ತೀರ್ಪು ಇಂದು ಪ್ರಕಟವಾಗಿದೆ. ಗ್ರೂಪ್‌ ʻಎʼ ನಂತಹ ಉನ್ನತ ಹುದ್ದೆಗೇರುವುದು ಎಸ್‌ಸಿ ಹಾಗೂ ಎಸ್‌ಟಿ ನೌಕರರಿಗೆ ಬಹಳ ಕಷ್ಟ. ಇಂತಹ ಉನ್ನತ ಹುದ್ದೆಗಳಿಗೆ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ನೌಕರರನ್ನು ಭರ್ತಿ ಮಾಡುವುದಕ್ಕೆ ಅನುಕೂಲ ಕಲ್ಪಿಸುವಂತಹ ವಾಸ್ತವದಿಂದ ಕೂಡಿದ ಆಧಾರವನ್ನು ಸುಪ್ರೀಂ ಕೋರ್ಟ್‌ ಒದಗಿಸಬೇಕು ಎಂದು ಅಕ್ಟೋಬರ್‌ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ: ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಲ್ಲಿ ಹಿಜಬ್‌ ಧರಿಸಲು ಅವಕಾಶವಿಲ್ಲ: ಕೇರಳ ಸರ್ಕಾರ

Share This Article
Leave a Comment

Leave a Reply

Your email address will not be published. Required fields are marked *