ನವದೆಹಲಿ: ಬೌದ್ಧ ಧರ್ಮಕ್ಕೆ (Buddhism) ಮತಾಂತರಗೊಂಡ ಬಳಿಕ ಅಲ್ಪಸಂಖ್ಯಾತರ ಕೋಟಾದಡಿ(Minority Reservation) ಮೀಸಲಾತಿ ಕೇಳಿದ್ದ ಮೇಲ್ಜಾತಿ ಹಿಂದೂ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಇದೊಂದು ಹೊಸ ರೀತಿಯ ವಂಚನೆ ಎಂದು ಕರೆದು ಆಕ್ಷೇಪ ವ್ಯಕ್ತಪಡಿಸಿದೆ
ಅಲ್ಪಸಂಖ್ಯಾತ ಅಭ್ಯರ್ಥಿ ಕೋಟಾದ ಅಡಿ ಪ್ರವೇಶ ಕೋರಿ ನಿಖಿಲ್ ಕುಮಾರ್ ಪುನಿಯಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನೀವು ಹೇಗೆ ಅಲ್ಪಸಂಖ್ಯಾತರು? ನೀವು ಯಾವ ಪುನಿಯಾ ಎಂದು ಸಿಜೆಐ ಕಾಂತ್ ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲ ಜಾತ್ ಪುನಿಯಾ ಎಂದು ಉತ್ತರಿಸಿದರು. ಈ ಉತ್ತರ ಬಂದ ಬೆನ್ನಲ್ಲೇ, ನೀವು ಹೇಗೆ ಅಲ್ಪಸಂಖ್ಯಾತರು ಎಂದು ಪೀಠ ಮರು ಪ್ರಶ್ನೆ ಹಾಕಿತು. ಈ ಪ್ರಶ್ನೆಗೆ ವಕೀಲರು, ಈಗ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಅದು ನನ್ನ ಹಕ್ಕು ಎಂದು ಉತ್ತರಿಸಿದರು.
ವಕೀಲರ ಉತ್ತರಕ್ಕೆ ಗರಂ ಆದ ಸಿಜೆಐ ಇದು ಹೊಸ ರೀತಿಯ ವಂಚನೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ನಂತರ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಿಕೊಳ್ಳುವ ಮೂಲಕ ಅಲ್ಪಸಂಖ್ಯಾತ ಪ್ರಮಾಣಪತ್ರವನ್ನು ಪಡೆಯಬಹುದೇ? ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡಲು ಏನೇನು ಮಾರ್ಗಸೂಚಿಗಳಿವೆ ಎಂದು ತಿಳಿಸುವಂತೆ ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು.

