ಲಲಿತ್ ಮೋದಿಗೆ ಶಾಕ್ – ಬಿಸಿಸಿಐನಿಂದ ಇಡಿ ದಂಡ ಪಾವತಿಸಲು ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ

Public TV
2 Min Read

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ ವಿಧಿಸಿರುವ 10.65 ಕೋಟಿ ರೂ. ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ ಲಲಿತ್ ಮೋದಿ (Lalit Modi) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

ಇದೇ ವೇಳೆ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಆರ್.ಮಹಾದೇವನ್ ಅವರ ಪೀಠವು ಕಾನೂನಿನಡಿಯಲ್ಲಿ ಲಭ್ಯವಿರುವ ನಾಗರಿಕ ಪರಿಹಾರಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಐಪಿಎಲ್ ಸೀಸನ್‌ನಲ್ಲಿ ಫೆಮಾ ಉಲ್ಲಂಘನೆಗಾಗಿ ವಿಧಿಸಿದ ದಂಡದ ಕುರಿತು ಸುಪ್ರೀಂ ಕೋರ್ಟ್ಗೆ ಲಲಿತ್ ಮೋದಿಯವರು ಸಲ್ಲಿಸಿದ ಅರ್ಜಿಯಲ್ಲಿ, 2005 ರಿಂದ 2010ರವರೆಗೆ ಬಿಸಿಸಿಐನ ಉಪಾಧ್ಯಕ್ಷರಾಗಿ ಹಾಗೂ 2007ರಿಂದ 2010ರವರೆಗೆ ಐಪಿಎಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ್ದರು. ಜೊತೆಗೆ ಬಿಸಿಸಿಐ ನಿಯಮಗಳ ಪ್ರಕಾರ, ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಯಾವುದೇ ನಷ್ಟ ಅಥವಾ ಖರ್ಚು ಉಂಟಾದಲ್ಲಿ ಅದನ್ನು ಮಂಡಳಿ ಭರಿಸಬೇಕೆಂದು ಒಡಂಬಡಿಕೆ ಇದೆ ಎಂದು ಉಲ್ಲೇಖಿಸಿದ್ದರು.ಇದನ್ನೂ ಓದಿ: ಶಾಲಾ ಬಸ್, ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿ – ಪವಾಡ ಸದೃಶವಾಗಿ ಚಾಲಕ ಪಾರು

ಜೊತೆಗೆ ಇದಕ್ಕೂ ಮುನ್ನ ಬಿಸಿಸಿಐ, ಕೆಲವು ಅಧಿಕಾರಿಗಳಾದ ಎನ್.ಶ್ರೀನಿವಾಸನ್ ಮತ್ತು ಖಜಾಂಚಿ ಎಂ.ಪಿ. ಪಾಂಡೋವ್ ಅವರ ಈ ರೀತಿಯ ದಂಡಗಳನ್ನು ಭರಿಸಿದೆ ಎಂದು ಉದಾಹರಣೆ ನೀಡಿದ್ದರು. ಹೀಗಾಗಿ ಬಿಸಿಸಿಐ ನಿಯಮಗಳಲ್ಲಿ ತಾರತಮ್ಯ ಮಾಡುತ್ತದೆ ಎಂದು ಆರೋಪಿಸಿದ್ದರು. ಇದು ಆರ್ಥಿಕ ಹೊರೆಯುಂಟು ಮಾಡುತ್ತದೆ ಎಂದಿದ್ದರು. ಆದರೆ ಈ ವಾದವನ್ನು ಒಪ್ಪಿಕೊಳ್ಳದೇ 2005ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಬಿಸಿಸಿಐ ಸರ್ಕಾರಿ ಸಂಸ್ಥೆಯಾಗಿ ಗುರುತಿಸಲ್ಪಡದಿರುವುದರಿಂದ ಈ ರೀತಿಯ ದಂಡವನ್ನು ಭರಿಸಲು ಆದೇಶಿಸಲಾಗದು ಎಂದು ತಿಳಿಸಿದೆ.

ಈ ಕುರಿತು 2023ರ ಡಿ.19 ರಂದು ಬಾಂಬೆ ಹೈಕೋರ್ಟ್ ಕೂಡ ಲಲಿತ್ ಮೋದಿಯವ ಅರ್ಜಿಯನ್ನು, ಇದೊಂದು ತಪ್ಪು ಕಲ್ಪನೆ ಎಂದು ಹೇಳಿ ತಿರಸ್ಕರಿಸಿತ್ತು. ಜೊತೆಗೆ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ನಾಲ್ಕು ವಾರಗಳೊಳಗೆ 1 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶಿಸಿತ್ತು.

2013ರಲ್ಲಿ ಬಿಸಿಸಿಐನಿಂದ ನಿಷೇಧಕ್ಕೊಳಗಾದ ಲಲಿತ್ ಮೋದಿ, ಐಪಿಎಲ್ ಫ್ರಾಂಚೈಸ್‌ಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ದುರುಪಯೋಗ ಮತ್ತು ಆರ್ಥಿಕ ಅಕ್ರಮಗಳ ಆರೋಪಗಳನ್ನು ಎದುರಿಸಿದ್ದರು.ಇದನ್ನೂ ಓದಿ: ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಇರುತ್ತೆ: ಒಟ್ಟಾಗಿಯೇ ಇದ್ದೇವೆ ಎಂದು ಹೇಳಿ ಡಿಕೆಶಿಯ ಕೈ ಎತ್ತಿದ ಸಿಎಂ

Share This Article