ಕಲ್ಕತ್ತಾ ಹೈಕೋರ್ಟ್‌ Vs ಸುಪ್ರೀಂ – ಸಂಜೆ ತುರ್ತು ವಿಚಾರಣೆ, ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಆದೇಶಕ್ಕೆ ತಡೆ

Public TV
2 Min Read

ನವದೆಹಲಿ: ಬಹಳ ಅಪರೂಪದ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್‌ (Supreme Court) ಶುಕ್ರವಾರ ಸಂಜೆ ದಿಢೀರ್‌ ವಿಚಾರಣೆ ನಡೆಸಿ ಕಲ್ಕತ್ತಾ ಹೈಕೋರ್ಟ್‌ (Calcutta High Court ) ಆದೇಶಕ್ಕೆ ತಡೆ ನೀಡಿದೆ.

ತಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವರದಿ ಮತ್ತು ಸುಪ್ರೀಂ ಆದೇಶದ ಅಧಿಕೃತ ಪ್ರತಿಯನ್ನು ರಾತ್ರಿ 12:15ರ ಒಳಗಡೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್‌ಗೆ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ (Justice Abhijit Gangopadhyay) ಆದೇಶಿಸಿದ್ದರು.

ಈ ಆದೇಶ ಪ್ರಕಟವಾದ ಬೆನ್ನಲ್ಲೇ ಸುಪ್ರೀಂ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಸಂಜೆ ತುರ್ತು ವಿಚಾರಣೆ ನಡೆಸಿ ಹೈಕೋರ್ಟ್‌ನ ಆದೇಶವು ಅಸಮರ್ಪಕ ಮತ್ತು ನ್ಯಾಯಾಂಗ ಶಿಸ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟು ಆದೇಶಕ್ಕೆ ತಡೆ ನೀಡಿದೆ. ಇದನ್ನೂ ಓದಿ: ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ

ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾ.ಗಂಗೋಪಾಧ್ಯಾಯ ನಡೆಸುತ್ತಿದ್ದರು. ವಿಚಾರಣೆ ನಡೆಸುತ್ತಿರುವಾಗಲೇ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.

ಟಿವಿ ವಾಹಿನಿಗೆ ಸಂದರ್ಶನ ನೀಡಿದ್ದನ್ನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್‌ ಗರಂ ಆಗಿ ಬಾಕಿ ಉಳಿದಿರುವ ವಿಷಯಗಳ ಕುರಿತು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುವುದು ನ್ಯಾಯಾಧೀಶರ ಕೆಲಸವಲ್ಲ. ಅರ್ಜಿದಾರರ ಬಗ್ಗೆ ನ್ಯಾಯಾಧೀಶರು ಅಭಿಪ್ರಾಯವನ್ನು ನೀಡಿದರೆ, ಅವರು ಆ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ.ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹೊಸ ಪೀಠವನ್ನು ರಚಿಸಬೇಕು ಎಂದು ಸಿಜೆಐ ಸೂಚಿಸಿದ್ದರು.

ಶಿಕ್ಷಕರ ನೇಮಕಾತಿ ಹಗರಣದ ವಿಚಾರಣೆಯನ್ನು ನ್ಯಾ. ಗಂಗೋಪಾಧ್ಯಾಯ ಅವರು  ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿತ್ತು. ಈ ಆದೇಶದ ಬೆನ್ನಲ್ಲೇ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ರಾತ್ರಿ 12 ಗಂಟೆಯ ಒಳಗಡೆ ತಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವರದಿಯನ್ನು ನೀಡಬೇಕು. ನಾನು 12:15ರವರೆಗೆ ನನ್ನ ಚೇಂಬರ್‌ನಲ್ಲಿ ಕಾಯುತ್ತೇನೆ. ಇದರೊಂದಿಗೆ ಶಿಕ್ಷಕರ ನೇಮಕಾತಿ ಪ್ರಕರಣದ ವಿಚಾರಣೆಯಿಂದ ನನ್ನನ್ನು ತೆಗೆದುಹಾಕಲು ಕಾರಣವಾದ ದಾಖಲೆಗಳನ್ನು ತನ್ನ ಮುಂದೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ಗೆ ತಕ್ಷಣವೇ ತಿಳಿಸುವಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿದ್ದರು. ಈ ಆದೇಶಕ್ಕೆ ಸುಪ್ರೀಂ ಈಗ ತಡೆ ನೀಡಿದೆ.

Share This Article