ಒಬಿಸಿ ಮೀಸಲಾತಿ ಏರಿಸಿದ್ದ ತೆಲಂಗಾಣಕ್ಕೆ ಭಾರೀ ಹಿನ್ನಡೆ – ಸುಪ್ರೀಂನಲ್ಲಿ ಅರ್ಜಿ ವಜಾ

Public TV
1 Min Read

ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಅಥವಾ ಒಬಿಸಿ ಸಮುದಾಯಗಳಿಗೆ (OBC Community) ಮೀಸಲಾತಿ ಹೆಚ್ಚಿಸಿದ್ದ ತೆಲಂಗಾಣ ಸರ್ಕಾರಕ್ಕೆ (Telangana Government) ಭಾರೀ ಹಿನ್ನಡೆಯಾಗಿದೆ.

ಒಬಿಸಿ ಮೀಸಲಾತಿ (Resevartion) ವಿಸ್ತರಿಸಿ ತಾನು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಸಂದೀಪ್ ಮೆಹ್ತಾ ಅವರಿದ್ದ ಪೀಠವು ಇಂದು ಅರ್ಜಿ ವಿಚಾರಣೆ ನಡೆಸಿ, ಹೈಕೋರ್ಟ್‌ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಒಬಿಸಿ ಮೀಸಲಾತಿಯಲ್ಲಿ ಯಾವುದೇ ಪ್ರಸ್ತಾವಿಸಿದಂತೆ ಹೆಚ್ಚಳ ಮಾಡದೇ ಸ್ಥಳೀಯ ಚುನಾವಣೆಗಳನ್ನು ನಡೆಸಬಹುದು ಸೂಚಿಸಿದೆ. ಇದನ್ನೂ ಓದಿ:  ರಸ್ತೆ ಗುಂಡಿ, ತೆರೆದ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಮೃತಪಡುವವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಿ: ಬಾಂಬೆ ಹೈಕೋರ್ಟ್‌ ಆದೇಶ

 

ತೆಲಂಗಾಣ ಸರ್ಕಾರ ಇತರೇ ಹಿಂದುಳಿದ ವರ್ಗಕ್ಕೆ ಶೇ.42ರಷ್ಟು ಮೀಸಲಾತಿ ನೀಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ.67ಕ್ಕೆ ಏರಿಕೆಯಾಗಿತ್ತು. 1992 ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50 ಮಿತಿಯನ್ನು ಏರುವಂತಿಲ್ಲ ತೀರ್ಪು ನೀಡಿತ್ತು. ಸುಪ್ರೀಂ ತೀರ್ಪು ಉಲ್ಲಂಘನೆಯಾಗಿದ್ದರಿಂದ ಅ.10 ರಂದು ತೆಲಂಗಾಣ ಹೈಕೋರ್ಟ್‌ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

ತನ್ನ ಆದೇಶದಲ್ಲಿ ಒಬಿಸಿ ಕೋಟಾದಲ್ಲಿ ಹೆಚ್ಚು ಮಾಡಲಾದ ಶೇ.17ರಷ್ಟು ಸೀಟುಗಳನ್ನು ಸಾಮಾನ್ಯ ಎಂದು ಪರಿಗಣಿಸಿ ಚುನಾವಣೆ ನಡೆಸಲು ಹೈಕೋರ್ಟ್‌ ಸೂಚಿಸಿತ್ತು. ಜತೆಗೆ ವಿವರವಾದ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ 4 ವಾರ, ಅರ್ಜಿದಾರರಿಗೆ 2 ವಾರಗಳ ಗಡುವು ವಿಧಿಸಿತ್ತು.

Share This Article