SBIಗೆ ಹಿನ್ನಡೆ- ನಾಳೆಯೊಳಗೆ ಚುನಾವಣಾ ಬಾಂಡ್ ಮಾಹಿತಿ ನೀಡಲು ಸುಪ್ರೀಂ ಸೂಚನೆ

Public TV
3 Min Read

ನವದೆಹಲಿ: ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‌ಗಳ ಮಾಹಿತಿ ನೀಡಲು ಜೂನ್ 30 ವರೆಗೂ ಕಾಲವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ‌. ಹೆಚ್ಚುವರಿ ಮಾಹಿತಿ ನೀಡಲು ಸಾಧ್ಯವಿಲ್ಲ ಮಂಗಳವಾರ ಸಂಜೆಯೊಳಗೆ ಅಗತ್ಯ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗದ ಜೊತೆಗೆ ಹಂಚಿಕೊಳ್ಳಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚನೆ ನೀಡಿದೆ.

ಮಾರ್ಚ್ 6 ರೊಳಗೆ ಮಾಹಿತಿ ನೀಡುವಂತೆ ಈ ಹಿಂದೆ ಸಾಂವಿಧಾನಿಕ ಪೀಠ ಆದೇಶ ನೀಡಿದ ಹಿನ್ನೆಲೆ ಹೆಚ್ಚುವರಿ ಸಮಯ ಕೋರಿ ಎಸ್‌ಬಿಐ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಿಚಾರಣೆ ನಡೆಸಿತು. ಬ್ಯಾಂಕ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು.

ಈ ಹಿಂದೆ ನೀಡಿದ ಆದೇಶವನ್ನು ಅನುಸರಿಸಲು ನಮಗೆ ಸ್ವಲ್ಪ ಸಮಯ ಬೇಕಾಗುತ್ತದೆ, ನಾವು ಬಾಂಡ್ ನೀಡಿದ ಮಾಹಿತಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕಿದೆ. ಇದು ರಹಸ್ಯ ಮಾಹಿತಿಯಾದ ಹಿನ್ನಲೆ ನಾವು ಕೊಡುಗೆದಾರರ ಮಾಹಿತಿ ಮತ್ತು ಬಾಂಡ್ ಸಂಖ್ಯೆಯನ್ನು ದತ್ತಾಂಶವಾಗಿ ಶೇಖರಿಸಿಲ್ಲ ಈ ಮಾಹಿತಿ ಸಂಗ್ರಹಿಸಲು ಸಮಯ ಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಿಜೆಐ ಡಿ.ವೈ ಚಂದ್ರಚೂಡ್, ದಾನಿಗಳ ವಿವರಗಳನ್ನು ಗೊತ್ತುಪಡಿಸಿದ ಶಾಖೆಯಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ ಮತ್ತು ಅದು ಮುಂಬೈನಲ್ಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ರಾಜಕೀಯ ಪಕ್ಷಗಳು ಯಾವುದೇ ಶಾಖೆಗಳಲ್ಲಿ ಖಾತೆಯನ್ನು ನಿರ್ವಹಿಸಿದರು ಚುನಾವಣಾ ಬಾಂಡ್‌ಗಳನ್ನು ಮುಂಬೈ ಶಾಖೆಗೆ ಮಾತ್ರ ಠೇವಣಿ ಇಡಬಹುದು ಎಂದು ಹೇಳಿದೆ. ಎಲ್ಲಾ ಮಾಹಿತಿ ಈಗಾಗಲೇ ಮುಂಬೈ ಶಾಖೆಗೆ ಬಂದಿವೆ ಮಾಹಿತಿ ನೀಡಲು ಏನು ಸಮಸ್ಯೆ ಎಂದರು.

ಪ್ರತಿ ಖರೀದಿಗೆ ಪ್ರತ್ಯೇಕ KYC ಇರಬೇಕು ಎಂದು FAQ ಗಳು ಸೂಚಿಸಿವೆ. ಆದ್ದರಿಂದ ನೀವು ಈಗಾಗಲೇ ವಿವರಗಳನ್ನು ಹೊಂದಿದ್ದೀರಿ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನೀವು ಮುಚ್ಚಿದ ಕವರ್ ಅನ್ನು ತೆರೆಯಬೇಕು, ವಿವರಗಳನ್ನು ಒಟ್ಟುಗೂಡಿಸಿ ಮತ್ತು ಮಾಹಿತಿಯನ್ನು ನೀಡಬೇಕು, ಇದಕ್ಕೆ ಹೆಚ್ಚಿನ ಸಮಯ ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೋದಿ ಕರ್ನಾಟಕ ಪ್ರವಾಸಕ್ಕೆ ಡೇಟ್ ಫಿಕ್ಸ್ – ಈ 12 ಕ್ಷೇತ್ರಗಳೇ ಟಾರ್ಗೆಟ್

ಇದಕ್ಕೆ ಉತ್ತರಿಸಿದ ಸಾಳ್ವೆ, ಬಾಂಡ್ (Electoral Bond) ಅನ್ನು ಯಾರು ಖರೀದಿಸಿದ್ದಾರೆ ಎಂಬುದರ ಕುರಿತು ನಮ್ಮ ಬಳಿ ಸಂಪೂರ್ಣ ವಿವರಗಳಿವೆ ಮತ್ತು ಹಣ ಎಲ್ಲಿಂದ ಬಂತು ಮತ್ತು ಯಾವ ರಾಜಕೀಯ ಪಕ್ಷವು ಎಷ್ಟು ಟೆಂಡರ್ ನೀಡಿದೆ ಎಂಬ ಸಂಪೂರ್ಣ ವಿವರ ನನ್ನ ಬಳಿ ಇದೆ, ಆದರೆ ನಾವು ಈಗ ಖರೀದಿಸಿದವರ ಹೆಸರನ್ನೂ ಹಾಕಬೇಕಾಗಿದೆ, ಹೆಸರುಗಳನ್ನು ಕ್ರೋಢೀಕರಿಸಬೇಕು, ಬಾಂಡ್ ಸಂಖ್ಯೆಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು, ಫಾರ್ಮ್ ಟು ಫಾರ್ಮ್ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಇನ್ನೂ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ನಾನು ತಪ್ಪು ಮಾಡಲು ಸಾಧ್ಯವಿಲ್ಲ, ತಪ್ಪು ಮಾಡಿದ್ದಲ್ಲಿ ದಾನಿಗಳಿಂದ ನನ್ನ ಮೇಲೆ ಮೊಕದ್ದಮೆ ಹೂಡುವ ಸಾಧ್ಯತೆಗಳಿದೆ, ಕನಿಷ್ಠ ಮಾಹಿತಿ ನೀಡಲು 2-3 ವಾರಗಳ ಸಮಯ ಬೇಕು ಎಂದರು.

ವಾದ ಆಲಿಸಿದ ಬಳಿಕ ತೀರ್ಪು ನೀಡಿದ ಸಿಜೆಐ ಡಿ.ವೈ ಚಂದ್ರಚೂಡ್, 2024 ರ ಫೆಬ್ರವರಿ 15 ತೀರ್ಪಿನ ಮೂಲಕ, ಈ ನ್ಯಾಯಾಲಯವು ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು RPA 1951 ಮತ್ತು ಆದಾಯ ತೆರಿಗೆ ಕಾಯಿದೆ 1961 ಅನ್ನು ತಿದ್ದುಪಡಿ ಮಾಡಿದ ಹಣಕಾಸು ಕಾಯಿದೆ 2017 ರ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿದೆ. ಆರ್ಟಿಕಲ್ 19(1)(ಎ) ಅಡಿಯಲ್ಲಿ ನಾಗರಿಕರ ಮಾಹಿತಿ ಹಕ್ಕು ಉಲ್ಲಂಘನೆಯಾಗಿದೆ.

ಕಾರ್ಪೊರೇಟ್ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ಅನಿಯಮಿತ ಧನಸಹಾಯವನ್ನು ಅನುಮತಿಸುವ ಹಣಕಾಸು ಕಾಯಿದೆ 2017 ರ ಮೂಲಕ ಪರಿಚಯಿಸಲಾದ ತಿದ್ದುಪಡಿಗಳು ಆರ್ಟಿಕಲ್ 14 ರ ಉಲ್ಲಂಘನೆಯಾಗಿದೆ. ಏ. 12 ವರೆಗಿನ ದಾಖಲೆಗಳನ್ನು ನೀಡಲು ಆದೇಶಿಸಿತ್ತು. ಮಾಹಿತಿ ಕೇಳಲು ಬ್ಯಾಂಕ್ ಹೆಚ್ಚುವರಿ ಸಮಯ ಕೇಳಿದೆ. ದಾಖಲೆಗಳ ಲಭ್ಯತೆ ಹಿನ್ನಲೆ ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ, ಮಂಗಳವಾರ ಸಂಜೆಯೊಳಗೆ ಮಾಹಿತಿ ನೀಡಬೇಕು.

ಚುನಾವಣಾ ಬಾಂಡ್ ಖರೀದಿಸಿದ ಪ್ರತಿ, ಚುನಾವಣಾ ಬಾಂಡ್‌ಗಳ ವಿವರಗಳು, ಖರೀದಿದಾರರ ಹೆಸರು, ಚುನಾವಣಾ ಬಾಂಡ್‌ಗಳ ಮುಖಬೆಲೆ ಮತ್ತು ರಾಜಕೀಯ ಪಕ್ಷಗಳು ನಗದೀಕರಿಸಿದ ದಿನಾಂಕ ಸೇರಿದಂತೆ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ನೀಡಬೇಕು ಈ ಮಾಹಿತಿಯನ್ನು ಮಾರ್ಚ್, 15 ರೊಳಗೆ ಕೇಂದ್ರ ಚುನಾವಣಾ ಆಯೋಗ (Central Election Commission) ತನ್ನ ವೆಬ್‌ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿತು. ಈ ಮೂಲಕ ಜೂನ್ 30 ವರೆಗೂ ಸಮಯ ಕೋರಿದ್ದ ಎಸ್‌ಬಿಐ (SBI) ಅರ್ಜಿಯನ್ನು ವಜಾಗೊಳಿಸಿತು.

Share This Article