ರಫೇಲ್ ಪ್ರಕರಣದಲ್ಲಿ ಕೇಂದ್ರಕ್ಕೆ ಹಿನ್ನಡೆ – ಪತ್ರಿಕಾ ದಾಖಲೆಗಳು ಸಾಕ್ಷ್ಯ: ಸುಪ್ರೀಂ

Public TV
2 Min Read

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಮರು ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಕೇಂದ್ರ ಸರ್ಕಾರದ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಸಂಜೀವ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ತಿರಸ್ಕರಿಸಿದೆ.

ಪತ್ರಿಕೆಯೊಂದು ರಫೇಲ್ ಖರೀದಿ ಸಂಬಂಧ ಹಲವು ದಾಖಲೆಗಳನ್ನು ಪ್ರಕಟಿಸಿತ್ತು. ಈ ದಾಖಲೆಗಳನ್ನು ರಕ್ಷಣಾ ಇಲಾಖೆಯಿಂದ ಕದ್ದು ಪ್ರಕಟಿಸಿದೆ ಎಂದು ಸರ್ಕಾರ ವಾದವನ್ನು ಮಂಡಿಸಿತ್ತು. ಸುಪ್ರೀಂ ಕೋರ್ಟ್ ಈಗ ಈ ದಾಖಲೆಗಳನ್ನು ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಎಂದು ಹೇಳಿದೆ.

ಕಳೆದ ಡಿಸೆಂಬರ್ 14ರಂದು ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಮರುಪರಿಶೀಲನಾ ಅರ್ಜಿಗಳನ್ನು ಅರ್ಹತೆಗಳ ಆಧಾರದ ಮೇಲೆ ನಿರ್ಧರಿಸಲಾಗುವುದು. ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.

ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ್ದರು. ಈ ದಾಖಲೆಗಳು ಸೂಕ್ಷ್ಮವಾಗಿದ್ದು ರಕ್ಷಣಾ ಸಚಿವಾಲಯದ ಮೂಲಗಳಿಂದ ನಾನು ಪಡೆದಿದ್ದೇನೆ ಪ್ರಶಾಂತ್ ಭೂಷಣ್ ತಿಳಿಸಿದ್ದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿರುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಉಲ್ಲೇಖಿಸಿ ವರದಿಯನ್ನು ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಅಥವಾ ಹಾಲಿ ಉದ್ಯೋಗಿಗಳು ದಾಖಲೆಗಳನ್ನು ಕದ್ದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ವೇಣುಗೋಪಾಲ್ ಈ ಅಭಿಪ್ರಾಯವನ್ನು ಮಂಡಿಸಿದ ಕೂಡಲೇ ರಕ್ಷಣಾ ಇಲಾಖೆಯ ಮಾಹಿತಿಯನ್ನು ಕಾಪಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ನಂತರದ ಕೋರ್ಟ್ ವಿಚಾರಣೆಯಲ್ಲಿ ವೇಣುಗೋಪಾಲ್ ದಾಖಲೆಗಳು ಕಳುವಾಗಿದೆ ಎಂದರೆ ಕಳ್ಳತನವಲ್ಲ. ಅಲ್ಲಿ ಪ್ರಸ್ತಾಪಗೊಂಡ ಮೂಲ ದಾಖಲೆಯ ನಕಲು ಪ್ರತಿಗಳು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ರಫೇಲ್ ಸುದ್ದಿ ಪ್ರಕಟಿಸಿ ವಿಚಾರಣೆ ವೇಳೆ ಪ್ರಭಾವ ಮೂಡಿಸುವ ಯತ್ನ ನಡೆಯುತ್ತಿದೆ. ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿದಾರರು ವಾದಿಸುತ್ತಿದ್ದಾರೆ. ಅರ್ಜಿದಾರರು ಉಲ್ಲೇಖಿಸಿದ ಮಾಹಿತಿ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಮತ್ತು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬಾರದು. ಹೀಗಾಗಿ ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಈ ದಾಖಲೆಗಳನ್ನು ಯಾವುದೇ ಕಾರಣಕ್ಕೆ ಅರ್ಜಿಯ ಜೊತೆ ಪರಿಗಣಿಸಬಾರದು ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈಗ ಸುಪ್ರೀಂ ಕೋರ್ಟ್ ಮಾಧ್ಯಮದಲ್ಲಿ ಪ್ರಕಟವಾದ ದಾಖಲೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದು ಎಂದು ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *