ಪಶುವೈದ್ಯೆ ಮೇಲೆ ಗ್ಯಾಂಗ್‍ರೇಪ್‍ಗೈದ ಆರೋಪಿಗಳ ಎನ್‍ಕೌಂಟರ್ ಉದ್ದೇಶಪೂರ್ವಕ- ಸುಪ್ರೀಂ ಆಯೋಗ

Public TV
2 Min Read

ನವದೆಹಲಿ: ಹೈದರಾಬಾದ್‍ನ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೇಹವನ್ನು ಸುಟ್ಟು ಹಾಕಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಉದ್ದೇಶ ಪೂರ್ವಕವಾಗಿ ಎನ್‍ಕೌಂಟರ್ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಆಯೋಗ ತಿಳಿಸಿದೆ.

ಎನ್‍ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸುಪ್ರೀಂ ನ್ಯಾ. ವಿ.ಎಸ್.ಸಿರ್ಪುಕರ್, ಬಾಂಬೆ ಹೈಕೋರ್ಟ್‍ನ ನಿವೃತ್ತ ನ್ಯಾ. ರೇಖಾ ಬಲ್ಡೋಟಾ ಮತ್ತು ಸಿಬಿಐನ ಮಾಜಿ ನಿರ್ದೇಶಕ ಡಾ. ಕಾರ್ತಿಕೇಯನ್ ಅವರಿದ್ದ ಆಯೋಗ ತನ್ನ ವರದಿಯನ್ನು ಸುಪ್ರೀಂಗೆ ಸಲ್ಲಿಸಿದೆ.

ಉದ್ದೇಶ ಪೂರ್ವಕವಾಗಿ ಪೊಲೀಸರು ಆರೋಪಿಗಳನ್ನು ಎನ್‍ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ನಾಲ್ವರಲ್ಲಿ ಮೂವರು ಅಪ್ರಾಪ್ತರು. ಸಂಬಂಧಿತ ಸಮಯದಲ್ಲಿ ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂಟಾ ಚೆನ್ನಕೇಶವುಲು ಅವರು ಅಪ್ರಾಪ್ತರಾಗಿದ್ದರು. ಈ ಹಿನ್ನೆಲೆಯಲ್ಲಿ 10 ಪೊಲೀಸ್ ಅಧಿಕಾರಿಗಳನ್ನು ಕೊಲೆ ಆರೋಪದ ಅಡಿ ವಿಚಾರಣೆಗೆ ಒಳಪಡಿಸಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬಾಯಿ ಮುಚ್ಚಿಸಲು ಕೋಟಿ ಹಣ ಸಂದಾಯ

ಮೃತರು 2019 ಡಿಸೆಂಬರ್ 6ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವುದು, ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವುದು ಮುಂತಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ ಎಂದು ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.

ಶುಕ್ರವಾರ ನಡೆದ ವಿಚಾರಣೆ ವೇಳೆ ಆಯೋಗದ ವರದಿಯನ್ನು ಮುಚ್ಚಿದ ಕವರ್‍ನಲ್ಲಿ ಇಡಬೇಕು ಎಂಬ ವಕೀಲರ ವಾದವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ. ಇದು ಎನ್‍ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದೆ. ಇಲ್ಲಿ ಇಡಲು ಏನೂ ಇಲ್ಲ. ಆಯೋಗವು ಯಾರು ತಪ್ಪಿತಸ್ಥರೆಂದು ಕಂಡುಹಿಡಿದಿದೆ. ನಾವು ಈ ವಿಷಯವನ್ನು ಹೈಕೋರ್ಟ್‍ಗೆ ವರ್ಗಾವಣೆ ಮಾಡಲು ಬಯಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

ಏನಿದು ಪ್ರಕರಣ?: 2019ರ ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು.

STOP RAPE

ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಅಪರಾಧ ಕೃತ್ಯದ ಮರುಸೃಷ್ಟಿ ಮಾಡಲು ಘಟನಾ ಸ್ಥಳಕ್ಕೆ ಆರೋಪಿಗಳನ್ನು ಪೊಲೀಸರು ಕರೆದೊಯ್ದ ವೇಳೆ, 2019ರ ಡಿಸೆಂಬರ್ 6ರಂದು ಎನ್‍ಕೌಂಟರ್ ನಡೆದಿತ್ತು. ಪಶುವೈದ್ಯೆಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದ್ದ ಹೈದರಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಹತರಾಗಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದರು. ಈ ಘಟನೆ ದೇಶದ್ಯಂತ ಸಂಚಲನ ಮೂಡಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *