ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್

Public TV
2 Min Read

ನವದೆಹಲಿ: ಯೋಗ ಗುರು ಬಾಬಾ ರಾಮ್‌ದೇವ್ (Yoga Guru Baba Ramdev) ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಶೋಕಾಸ್ ನೋಟಿಸ್ ಗೆ ಉತ್ತರ ನೀಡದ ಹಿನ್ನೆಲೆ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹಿಮಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ, ರಾಮ್‌ದೇವ್ ಮತ್ತು ಪತಂಜಲಿ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ, 1954 ರ ಸೆಕ್ಷನ್ 3 ಮತ್ತು 4 ಅನ್ನು ಪ್ರಾಥಮಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಟೀಕಿಸಿತ್ತು. ತಾತ್ಕಾಲಿಕವಾಗಿ ಪತಂಜಲಿ ಜಾಹೀರಾತು ನಿರ್ಬಂಧಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಆದರೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ಗೆ ಉತ್ತರಿಸದ ಹಿನ್ನೆಲೆ ಸುಪ್ರೀಂಕೋರ್ಟ್ ಗರಂ ಆಗಿದೆ. ನಮ್ಮ ಆದೇಶಗಳನ್ನು ನಿರ್ಲಕ್ಷ್ಯಿಸಿದ್ದೀರಿ. ಈ ಹಿನ್ನಲೆ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ಸೂಚಿಸಿದರು. ಪತಂಜಲಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ ರಾಮದೇವ್ ಪ್ರಕರಣಕ್ಕೆ ಹೇಗೆ ಸಂಬಂಧಿಸಿದ್ದಾರೆ ಅವರಿಗೆ ಯಾಕೆ ಸಮನ್ಸ್ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನೀವೂ ವಿಚಾರಣೆ ಹಾರಾಗುತ್ತಿದ್ದೀರಿ, ಹಾಜರಾಗಬೇಕು ಎಂದಷ್ಟೆ ಹೇಳಿತು.

ನಂತರ ಮುಕುಲ್ ರೋಹ್ಟಗಿ (Mukul Rohtagi) ಅವರು ಕಾನೂನು ಉಲ್ಲಂಘನೆ ನ್ಯಾಯಾಲಯದ ನಿಂದನೆ ಅಲ್ಲ ಮತ್ತು ತೆರೆದ ನ್ಯಾಯಾಲಯದಲ್ಲಿ ಹಾಜರಾಗುವ ಅವಶ್ಯಕತೆ ಏನಿದೆ ಎಂಬುದನ್ನು ಆದೇಶದಲ್ಲಿ ದಾಖಲಿಸಬೇಕು ಎಂದು ಹೇಳಿದರು. ಆದರೆ ನ್ಯಾಯಾಲಯ ಮಣಿಯದೆ ರಾಮ್‌ದೇವ್ ಖುದ್ದು ಹಾಜರಾಗುವಂತೆ ಆದೇಶ ನೀಡಿತು. ಇದನ್ನೂ ಓದಿ: ಬಿಜೆಪಿ ಅಸಮಾಧಾನಿತರಿಗೆ ಕಾಂಗ್ರೆಸ್ ಗೇಟ್ ಬಂದ್ – ಸಿಎಂ ಹೇಳಿದ ಖಡಕ್‌ ಮಾತು ಏನು?

ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಅದರ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲದಿದ್ದರೂ ಪತಂಜಲಿ ಔಷಧಿಗಳು ಕೆಲವು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಸುಳ್ಳು ಹೇಳಿಕೆ ನೀಡುವ ಮೂಲಕ ದೇಶವನ್ನು ದಾರಿ ತಪ್ಪಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಟೀಕಿಸಿತ್ತು.

Share This Article