ಮ್ಯಾನ್ ವರ್ಸಸ್ ವೈಲ್ಡ್ ಶೋಗಾಗಿ ಬಂಡೀಪುರ ಆಯ್ಕೆ ಮಾಡಿಕೊಂಡಿದ್ದೇ ರಜನಿಕಾಂತ್

Public TV
1 Min Read

ಚಾಮರಾಜನಗರ: ಡಿಸ್ಕವರಿ ಚಾನೆಲ್‍ನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಹಾಗೂ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಾಗಿ ಕಾಡು ಸುತ್ತಲಿದ್ದು, ಈಗಾಗಲೇ ತಲೈವಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.

ಕಳೆದ ವರ್ಷ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕಾಡು ಸುತ್ತಾಡಿ ಪರಿಸರ, ವನ್ಯಜೀವಿಗಳ ಬಗ್ಗೆ ಸಂವಾದ ನಡೆಸಿದ್ದರು. ಈ ಶೋ ಯಶಸ್ಸಿನ ನಂತರ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ವಿಶೇಷ ಸಂಚಿಕೆ ತಯಾರಾಗುತ್ತಿದೆ.

ವಿಷಯವೇನೆಂದರೆ ಜಿಮ್ ಕಾರ್ಬೆಟ್ ಬಳಿಕ ಎರಡನೇಯ ಜನಪ್ರಿಯ ಅಭಯಾರಣ್ಯ ಹುಡುಕಾಟದಲ್ಲಿ ಮಧ್ಯ ಪ್ರದೇಶದ ಕಾನಾ ಹಾಗೂ ಕರ್ನಾಟಕದ ಬಂಡೀಪುರವನ್ನು ಆಯ್ಕೆ ಮಾಡುವಾಗ ರಜನಿ ಬಂಡೀಪುರ ಸೂಚಿಸಿ, ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ರಜನಿಕಾಂತ್ ಬಂಡೀಪುರದಲ್ಲಿ ಕೆಲ ಚಿತ್ರಗಳ ಚಿತ್ರೀಕರಣ ನಡೆಸಿದ್ದಾರೆ. ಅಲ್ಲದೆ ಸಾಕಷ್ಟು ಬಾರಿ ಭೇಟಿ ನೀಡಿದ್ದರಿಂದ ಬಂಡೀಪುರವನ್ನು ರಜನಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಮೂಳೆಹೊಲೆ ಅರಣ್ಯ ವಲಯದಲ್ಲಿ 6 ಗಂಟೆಗಳ ಕಾಲ ರಜನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿದ್ದು, ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿದೆಯಷ್ಟೇ ಎನ್ನಲಾಗಿದೆ.

ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿರುವ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ ಎಂದು ಬಂಡೀಪುರ ಸಿಎಫ್‍ಒ ಬಾಲಚಂದ್ರಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *