ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

Public TV
2 Min Read

– ದೀಪಕ್ ಜೈನ್
ಉಡುಪಿ: ಓಖಿ ಚಂಡಮಾರುತ ತಮಿಳ್ನಾಡು ಮತ್ತು ಕೇರಳ ರಾಜ್ಯದ ನಿದ್ದೆಗೆಡಿಸಿದೆ. ಕರ್ನಾಟಕದ ಕರಾವಳಿಗರಿಗೆ ಚಳಿ ಹಿಡಿಸಿದೆ. ಸಮುದ್ರದಲ್ಲೆದ್ದ ಸುಳಿಗಾಳಿಗೂ ಬಾನಿನಲ್ಲಿರುವ ಚಂದ್ರನಿಗೂ ಲಿಂಕ್ ಇದೆ. ಸಮುದ್ರದ ಅಲೆಗಳನ್ನು ಫುಲ್ ಕಂಟ್ರೋಲ್ ಮಾಡೋನೇ ಆ ಚಂದ ಮಾಮ.

ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಸಾಮಾನ್ಯವಾಗಿ ಕಡಲು ಎಂದಿನಂತೆ ಇರೋದಿಲ್ಲ. ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಈ ಬಾರಿ ಹುಣ್ಣಿಮೆ ಜೊತೆ ಓಖಿ ಚಂಡಮಾರುತ ರೌದ್ರ ನರ್ತನ ತೋರುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಓಖಿ ಹುಣ್ಣಿಮೆ ಸಂದರ್ಭದಲ್ಲೇ ಹುಟ್ಟಿಕೊಂಡಿರೋದರಿಂದ ಅಪಾಯ ಜಾಸ್ತಿ.

ಓಖಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ತಟ್ಟಿದೆ. ಉಡುಪಿಯಲ್ಲಿ ಹುಣ್ಣಿಮೆಯ ಹಿಂದಿನ ದಿನ (ಡಿ.2) ಕಡಲು ತನ್ನ ರೌದ್ರ ನರ್ತನ ತೋರಿದೆ. ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ.

200 ನಾಟಿಕಲ್ ಮೈಲಿ ದೂರ ಚಂಡಮಾರುತದ ಸುಂಟರಗಾಳಿ ಇದ್ದರೂ, ಹುಣ್ಣಿಮೆ ಎಫೆಕ್ಟ್ ನಿಂದ ಸಮುದ್ರ ತೀರದಲ್ಲಿ ಅಲೆಗಳು ಉಬ್ಬುಬ್ಬಿ ಬರುತ್ತಿದೆ. ಅಬ್ಬರದ ಅಲೆಗಳಿಗೆ ಹೆದರಿ ಕಡಲತೀರದ ಜನ ಬೇರೆಡೆ ಶಿಫ್ಟ್ ಆಗುತ್ತಿದ್ದಾರೆ. ಹುಣ್ಣಿಮೆಯ ಭಯವೂ ಜನರನ್ನು ಕಾಡುತ್ತಿದೆ.

ಸಮುದ್ರಕ್ಕೂ ಚಂದ್ರನಿಗೂ ಸಂಬಂಧ!: ಸಮುದ್ರಕ್ಕೂ ಚಂದ್ರನಿಗೂ ಸಂಬಂಧವಿದೆ. ಚಂದ್ರನ ಚಲನೆಯ ಮೇಲೆಯೇ ಎಲ್ಲಾ ರಾಶಿ, ನಕ್ಷತ್ರಗಳು ನಿಂತಿರುವುದು. ತಿಂಗಳಿಗೊಂದು ಹುಣ್ಣಿಮೆ ಅಮವಾಸ್ಯೆ ಬರುತ್ತದೆ. 15 ದಿನಕ್ಕೊಮ್ಮೆ ಸಮುದ್ರದ ಮೇಲೆ ಎಫೆಕ್ಟ್ ಆಗುತ್ತದೆ. ಸಾಗರದ ನೀರು ದಡಕ್ಕೆ ಹತ್ತಿರಾಗೋದು ಈ ಎರಡು ದಿನಗಳಲ್ಲೇ ಜಾಸ್ತಿ.

ಅಮಾವಾಸ್ಯೆಯ ಹಿಂದಿನ ಮತ್ತು ನಂತರದ ದಿನ, ಹುಣ್ಣಿಮೆ ಮತ್ತು ಎರಡು ದಿನ ಅಲೆಗಳ ಸಂಖ್ಯೆ ಮತ್ತು ಅಪ್ಪಳಿಸುವ ರಭಸ ಹೆಚ್ಚಾಗಿರುತ್ತದೆ. ಹೀಗಾಗಿ ಓಖಿ ಮತ್ತು ಹುಣ್ಣಿಮೆ ಒಟ್ಟಾಗಿದ್ದು, ಅರಬ್ಬೀ ಸಮುದ್ರದ ಅಬ್ಬರ ಹೆಚ್ಚಾಗಲು ಒಂದು ಕಾರಣವಾಗಿದೆ. ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಲಪ್ಪಾ ಎಂದು ಸಮುದ್ರ ರಾಜನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಕಾಪು, ಪಡುಕೆರೆ, ಮಲ್ಪೆ, ಪಿತ್ರೋಡಿ ಆಸುಪಾಸಿನಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳನ್ನು ಮೇಲಕ್ಕೆ ಶಿಫ್ಟ್ ಮಾಡಿದ್ದೇವೆ. ಮೀನುಗಾರಿಕೆಗೆ ಹೋಗದಂತೆ ಎಚ್ಚರಿಕೆ ಕೊಟ್ಟಿರುವ ಕಾರಣ ಎರಡು ದಿನ ರಜೆ ತೆಗೆದುಕೊಂಡಿದ್ದೇವೆ ಎಂದು ಪಿತ್ರೋಡಿ ಸಂಜೀವ ಸಾಲಿಯಾನ್ ಮಾಹಿತಿ ನೀಡಿದರು.

ಪ್ರತೀ ಅಮವಾಸ್ಯೆ – ಹುಣ್ಣಿಮೆ ದಿನ ಬರುವಾಗ ಕಡಲು ಕಪ್ಪಗೆ ಮತ್ತು ಬೆಳ್ಳಗೆ ಆಗುತ್ತದೆ. ಈ ಬಾರಿ ಹುಣ್ಣಿಮೆ ದಿನದಂದೇ ದಕ್ಷಿಣದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಾವು ಕಸುಬಿಗೆ ಇಳಿಯಲು ಸ್ವಲ್ಪ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಹುಣ್ಣಿಮೆಯ ಹಿಂದಿನ ದಿನದ ರಾತ್ರಿ ಕೊಂಚಮಟ್ಟಿನ ರೌದ್ರಾವತಾರ ತೋರಿರುವ ಕಡಲು, ಹುಣ್ಣಿಮೆ ರಾತ್ರಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬ ಕುತೂಹಲ ಮತ್ತು ಆತಂಕ ಕರಾವಳಿಯ ಜನರಲ್ಲಿ ಇದೆ. ಅದರಲ್ಲೂ ಸಮುದ್ರವನ್ನೇ ಜೀವನ ಮಾಡಿಕೊಂಡಿರುವ, ತಟದಲ್ಲಿ ಮನೆ ಕಟ್ಟಿಕೊಂಡಿರುವ ಮೀನುಗಾರರಿಗೆ ಆತಂಕ ಕೊಂಚ ಹೆಚ್ಚೇ ಇದೆ.

Share This Article
Leave a Comment

Leave a Reply

Your email address will not be published. Required fields are marked *