ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ದರ್ಶನದೊಂದಿಗೆ ಹೊಸ ವರ್ಷ ಸ್ವಾಗತ!

Public TV
2 Min Read

ವಾಷಿಂಗ್ಟನ್‌: ಸಹವಾಗಿ ಭೂಮಿಯಲ್ಲಿರುವ ನಮಗೆ ದಿನಕ್ಕೆ ಒಂದು ಬಾರಿ ಸೂರ್ಯೋದಯ, ಸೂರ್ಯಾಸ್ತ (Sunrises And Sunsets) ಕಾಣಿಸುತ್ತದೆ. 12 ಗಂಟೆ ಬೆಳಕು, 12 ಗಂಟೆ ರಾತ್ರಿಯಲ್ಲಿ ಕಳೆಯುತ್ತೇವೆ. ಆದ್ರೆ ಒಂದು ದಿನದಲ್ಲಿ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುತ್ತಾರೆ ಅಂದ್ರೆ ನಂಬೋಕಾಗುತ್ತಾ?

ಹೌದು.. ಅಸಾಧ್ಯ ಅನ್ನಿಸಿದರೂ ಇದನ್ನ ನಂಬಲೇಬೇಕು. 2025ರ ಹೊಸ ವರ್ಷವನ್ನು ಭೂಮಿಯಲ್ಲಿರುವ ಜನ ಪಾರ್ಟಿ, ಮೋಜು ಮಸ್ತಿ, ದೇವಸ್ಥಾನ ಯಾತ್ರೆ, ಕೇಕ್‌ ಕತ್ತಿರಿಸಿ ಸಂಭ್ರಮಿಸುತ್ತಾ ಬರಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸುನೀತಾ ವಿಲಿಯಮ್ಸ್‌ (Sunita Williams) ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುವ ಮೂಲಕ ಬರಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಹಗಲು ರಾತ್ರಿ ಹೇಗಿರಲಿದೆ ಅನ್ನೋ ಚಿತ್ರಗಳನ್ನ ನಾಸಾ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಅಷ್ಟಕ್ಕೂ ಏನಿದು ವಿಜ್ಞಾನದ ಕೌತುಕ ಅನ್ನೋದನ್ನ ತಿಳಿಯಬೇಕಾ? ಹಾಗಿದ್ದರೆ ಮುಂದೆ ಓದಿ…

16 ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಹಿಂದಿನ ವಿಜ್ಞಾನ ಕಾರಣವೇನು?
ಜೂ.5 ರಂದು ಬೋಯಿಂಗ್ ಸ್ಟಾರ್‌ಲೈನರ್ ಹೊತ್ತೊಯ್ದಿದ್ದ ರಾಕೆಟ್, ಜೂ.6 ರಂದು ಬಾಹ್ಯಾಕಾಶ ನಿಲ್ದಾಣದ ಬಳಿ ತಲುಪಿತು. ಆದರೆ ಸ್ಟಾರ್‌ಲೈನರ್ ಎಂಜಿನ್‌ಗಳಲ್ಲಿ ದೋಷ ಕಂಡಿದ್ದರಿಂದ ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಜೋಡಿಸಲಾಯಿತು. ಈಗ ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಇದ್ದಾರೆ. ಇತ್ತೀಚೆಗೆ ಕ್ರೀಸ್ಮಸ್‌ ಹಬ್ಬದ ಸಂಭ್ರಮಾಚರಣೆಯನ್ನು ಸುನೀತಾ ವಿಲಿಯಮ್ಸ್‌ ಸ್ಪೇಸ್‌ನಲ್ಲೇ ಆಚರಿಸಿದರು. ಅದು ಪ್ರತಿ ಗಂಟೆಗೆ ಸರಿಸುಮಾರು 28,000 ಕಿಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ. ಐಎಸ್‌ಎಸ್ ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಪೂರ್ತಿ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ.

ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಸುಮಾರು 45 ನಿಮಿಷಗಳಿಗೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ಅನುಭವಿಸುತ್ತಾರೆ. ಭೂಮಿ ಮೇಲಿರುವ ಜನರು ದಿನಕ್ಕೆ ಒಂದು ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ಅನುಭವ ಹೊಂದುತ್ತಾರೆ. ಆದರೆ, ನಾವು ದಿನಕ್ಕೆ 16 ಬಾರಿ ಸೂರ್ಯ ಉದಯಿಸುವುದು ಮತ್ತು 16 ಬಾರಿ ಮುಳುಗುವುದನ್ನು ಕಾಣುತ್ತಿದ್ದೇವೆಂದು ಗಗನಯಾತ್ರಿಗಳು ಹೇಳಿಕೊಂಡಿದ್ದಾರೆ.

ಬಾಹ್ಯಾಕಾಶದಲ್ಲಿ ಹೊಸ ಹಗಲು-ರಾತ್ರಿಗಳ ರಿದಮ್!
ಭೂಮಿಯ ಮೇಲಿನ ಜೀವನಕ್ಕಿಂತ ಬಾಹ್ಯಾಕಾಶದ ಬದುಕು ಭಿನ್ನವಾಗಿರುತ್ತದೆ. ಭೂಮಿಯಲ್ಲಿ ಒಂದು ದಿನವು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯನ್ನು ಒಳಗೊಂಡಿರುತ್ತದೆ. ಆದರೆ, ಐಎಸ್‌ಎಸ್‌ನಲ್ಲಿ ಗಗನಯಾತ್ರಿಗಳು ಹೆಚ್ಚು ವೇಗದ ಚಕ್ರದ ಮೂಲಕ ಬದುಕುತ್ತಾರೆ. ಅವರು 45 ನಿಮಿಷಗಳ ಹಗಲು ಮತ್ತು ಅಷ್ಟೇ ನಿಮಿಷಗಳ ಕತ್ತಲನ್ನು ಅನುಭವಿಸುತ್ತಾರೆ. ಇದು ಹಗಲು-ರಾತ್ರಿಗಳ ನಿರಂತರ ಲಯವನ್ನು ಸೃಷ್ಟಿಸುತ್ತದೆ.

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ 2024ರ ಜೂನ್‌ನಿಂದ ಬಾಹ್ಯಾಕಾಶದಲ್ಲಿದ್ದಾರೆ. 8 ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಅವರು ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿಲ್ಲ. 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Share This Article