‘ಧೋನಿ’ಯನ್ನ ಬಿಟ್ಟು ಟೀಂ ಇಂಡಿಯಾ ಮುಂದೆ ಸಾಗಿದೆ: ಗವಾಸ್ಕರ್

Public TV
2 Min Read

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಮ್‍ಬ್ಯಾಕ್ ಬಗ್ಗೆ ಕ್ರಿಕೆಟ್ ಅಂಗಳದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಬೆನ್ನಲ್ಲೇ ಭಾರತ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಕೂಡ ಧೋನಿ ಕಮ್‍ಬ್ಯಾಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‍ನಲ್ಲಿ ಎಂ.ಎಸ್.ಧೋನಿ ಭಾರತದ ತಂಡದಲ್ಲಿ ಇರುವುದನ್ನು ನೋಡಲು ಇಷ್ಟಪಡುತ್ತೇನೆ. ಆದರೆ ತಂಡವು ಮಾಜಿ ನಾಯಕನಿಂದ ಮುಂದೆ ಸಾಗಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾಗೆ ಆಯ್ಕೆಯಾಗುವ ಹಂತದಿಂದ ಧೋನಿ ದೂರ ಉಳಿದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅವರು ಸದ್ದಿಲ್ಲದೆ ಆಟಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

ಮಾರ್ಚ್ 29ರಿಂದ ನಡೆಯಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ರದ್ದುಗೊಳಿಸಲಾಗಿದೆ. ಮುಂಬರುವ ವಾರಗಳಲ್ಲಿ ವೈರಸ್ ಭೀತಿ ಕಡಿಮೆಯಾಗಲಿದೆ. ಹೀಗಾಗಿ ಟೂರ್ನಿ ಏಪ್ರಿಲ್ ಬಳಿಕ ನಡೆಯಲಿದ್ದು, ವಿದೇಶಿ ಆಟಗಾರರು ಆಡುತ್ತಾರೋ, ಇಲ್ಲವೋ ಎನ್ನುವುದು ಖಚಿತವಾಗಿಲ್ಲ ಎಂದು ಹೇಳಿದರು.

ನ್ಯೂಜಿಲೆಂಡ್ ಸರಣಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯೂಜಿಲೆಂಡ್ ಪಿಚ್‍ಗಳು ಬ್ಯಾಟಿಂಗ್ ಮಾಡಲು ಸುಲಭವಲ್ಲ. ನಮ್ಮ ಬ್ಯಾಟ್ಸ್‌ಮನ್‌ಗಳು ಕಷ್ಟಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಿವೀಸ್ ಆಟಗಾರರು ಕೂಡ ಬ್ಯಾಟಿಂಗ್ ಮಾಡಲು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಬ್ಯಾಟ್ಸ್‌ಮನ್‌. ಅವರು ಕೂಡ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಮಾತನಾಡಿದ್ದ ವಿರೇಂದ್ರ ಸೆಹ್ವಾಗ್, ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ಅವರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ಕೂಡ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಂಡದಿಂದ ಹೊರಹಾಕುವುದು ಕಷ್ಟ. ಎಂ.ಎಸ್.ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಹೀಗಾಗಿ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದರು.

ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ನಂತರ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟೀಂ ಇಂಡಿಯಾಗೆ ಧೋನಿ ಮರಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಐಪಿಎಲ್ 13ನೇ ಆವೃತ್ತಿಯು ಕೊರೊನಾ ವೈರಸ್‍ನಿಂದಾಗಿ ರದ್ದಾಗುವ ಸಾಧ್ಯತೆಗಳಿವೆ. ಹೀಗಾಗಿ ಎರಡು ಮಾದರಿಯ ಕ್ರಿಕೆಟ್‍ನಲ್ಲಿ ವಿಶ್ವಕಪ್ ವಿಜೇತ ನಾಯಕನ ಭವಿಷ್ಯದ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *