ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!

Public TV
2 Min Read

ನೇಪಿಯರ್: ಇಲ್ಲಿನ ಮ್ಯಾಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಸೂರ್ಯನ ಕಿರಣಗಳು ನೇರವಾಗಿ ಬ್ಯಾಟ್ಸ್ ಮನ್ ಮುಖಕ್ಕೆ ಬೀಳುತ್ತಿದ್ದ ಕಾರಣ 40 ನಿಮಿಷಗಳ ಕಾಲ ಪಂದ್ಯಕ್ಕೆ ವಿರಾಮ ನೀಡಿದ ಅಪರೂಪದ ಘಟನೆ ನಡೆದಿದೆ.

ಗೆಲ್ಲಲು 158 ರನ್ ಗಳ ಟಾರ್ಗೆಟ್ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 10 ಓವರ್ ಪೂರ್ಣಗೊಂಡು ತಂಡದ ಡ್ರಿಂಕ್ಸ್ ಬ್ರೇಕ್ ಪಡೆದ ವೇಳೆ ಘಟನೆ ನಡೆದಿದೆ. ಸೂರ್ಯನ ಬೆಳಕು ನೇರವಾಗಿ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ ಮನ್ ಕಣ್ಣಿಗೆ ಬೀಳುತ್ತಿದ್ದ ಪರಿಣಾಮ ಅಂಪೈರ್ ಆಟ ನಿಲ್ಲಿಸಲು ಸೂಚಿಸಿದ್ದರು.

ಕ್ರಿಕೆಟ್ ಆಟದಲ್ಲಿ ಸಾಮಾನ್ಯವಾಗಿ ಮಂದ ಬೆಳಕು ಹಾಗೂ ಮಳೆಯ ಕಾರಣ ಆಟಕ್ಕೆ ತಡೆ ನೀಡಲಾಗುತ್ತದೆ. ಆದರೆ ಈ ಪಂದ್ಯದಲ್ಲಿ ಸೂರ್ಯನ ರಶ್ಮಿಗಳ ಕಾರಣದಿಂದ ತಡೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಅಫ್ರಿಕಾ ಅಂಪೈರ್ ಶಾನ್ ಜಾರ್ಜ್, 14 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಿಸಿದ್ದು, ಆಟಗಾರರ ರಕ್ಷಣೆಯ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಯಿತು. ಈ ಬಗ್ಗೆ ಆಟಗಾರರಿಗೆ ಹೆಚ್ಚಿನ ಅರಿವು ಇಲ್ಲದ ಕಾರಣ ಯಾವುದೇ ಆಟಗಾರು ಮನವಿ ಸಲ್ಲಿಸಲಿಲ್ಲ. ಆದ್ದರಿಂದ ನಾವೇ ಈ ನಿರ್ಧಾರ ಕೈಗೊಂಡಿದ್ದೇವು. ಆದರೆ ಪಂದ್ಯಕ್ಕೆ 30 ನಿಮಿಷಗಳ ಅಧಿಕ ಸಮಯ ಇರುವ ಕಾರಣ 50 ಓವರ್ ಗಳ ಪೂರ್ಣ ಆಟ ನಡೆಯುತ್ತದೆ ಎಂದು ತಿಳಿಸಿದ್ದರು. ಆದರೆ ಅಂತಿಮವಾಗಿ 1 ಓವರ್ ಅನ್ನು ಕಡಿತಗೊಳಿಸಲಾಯಿತು.

ಯಾಕೆ ಹೀಗಾಯ್ತು?
ಎಲ್ಲ ಸ್ಟೇಡಿಯಂಗಳ ಪಿಚ್ ಗಳು ಉತ್ತರ ದಕ್ಷಿಣವಾಗಿ ನಿರ್ಮಾಣವಾಗುತ್ತದೆ. ಆದರೆ ಇಲ್ಲಿನ ಪಿಚ್ ಪೂರ್ವ, ಪಶ್ಚಿಮ ದಿಕ್ಕಿನಲ್ಲಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಈ ಕ್ರೀಡಾಂಗಣವನ್ನು ಕ್ರಿಕೆಟ್ ಅಲ್ಲದೇ ಇನ್ನಿತರ ಆಟಕ್ಕೂ ಬಳಸಲಾಗುತ್ತದೆ.

ಕಳೆದ 2 ವರ್ಷಗಳ ಹಿಂದೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲದೇ ಜನವರಿ 19 ರಂದು ನಡೆದ ನ್ಯೂಜಿಲೆಂಡ್‍ನ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಹಾಗೂ ಕ್ಯಾಂಟರ್ಬರಿ ತಂಡಗಳ ಪಂದ್ಯದ ವೇಳೆಯೂ ಇದೇ ಕಾರಣಕ್ಕೆ ಆಟವನ್ನು ಸ್ಥಗಿತಗೊಳಿಸಲಾಗಿತ್ತು.

ಟೀಂ ಇಂಡಿಯಾ ವಿರುದ್ಧದ ಪಂದ್ಯದ ವೇಳೆ ಆಕಾಶದಲ್ಲಿ ಮೋಡಗಳನ್ನ ನಿರೀಕ್ಷೆ ಮಾಡಲಾಗಿತ್ತು. ಆದರೆ ಸೂರ್ಯನ ಪ್ರಭಾವ ಹೆಚ್ಚಾಗಿದ್ದ ಪರಿಣಾಮ ಆಟಕ್ಕೆ ತಡೆ ನೀಡಲಾಯಿತು. ಈ ಸಮಸ್ಯೆಗೆ ನಮ್ಮಿಂದ ಏನು ಮಾಡಲು ಸಾಧ್ಯವಿರಲಿಲ್ಲ. ಈ ರೀತಿಯ ಸಮಸ್ಯೆಯಿಂದಾಗಿ ಪಂದ್ಯಗಳು ಸ್ಥಗಿತಗೊಳ್ಳುವುದು ಇದೇ ಮೊದಲೆನಲ್ಲ ಎಂದು ಕ್ರೀಡಾಂಗಣದ ಅಧಿಕಾರಿಯೊಬ್ಬರು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *