ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದ ಸನ್ನಿಧಾನ- ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ʼಭಾಸ್ಕರʼ

Public TV
1 Min Read

ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ (Makar Sankranti)ಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಂತೆಯೇ ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ಹೌದು. ಪ್ರಕೃತಿಯ ವಿಸ್ಮಯಕ್ಕೆ ಸನ್ನಿಧಾನ ಸಾಕ್ಷಿಯಾಗಿದ್ದು, ಸಂಜೆ 5.25ಕ್ಕೆ ಸರಿಯಾಗಿ ಗವಿಗಂಗಾಧರೇಶ್ವರನಿಗೆ ಸೂರ್ಯದೇವ  ಸ್ಪರ್ಶಿಸಿದ. ಈ ವಿದ್ಯಾಮಾನ ಕಣ್ತುಂಬಿಕೊಳ್ಳಲು ಭಕ್ತಗಣ ಸಾಕ್ಷಿಯಾಯಿತು. ಇದನ್ನೂ ಓದಿ: ಅಯೋಧ್ಯೆಯಲ್ಲಿ ನಾಳೆಯಿಂದ್ಲೇ ಪೂರ್ವಭಾವಿ ಪೂಜೆಗಳು ಆರಂಭ: ಚಂಪತ್‌ ರೈ

ಮೊದಲು ದೇವರ ಅಭಿಷೇಕಕ್ಕೆ ಪೂರ್ಣಕುಂಭ ಕಳಸದೊಂದಿಗೆ ದೇವಸ್ಥಾನಕ್ಕೆ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಆಗಮಿಸಿದರು. ಸೂರ್ಯ ರಶ್ಮಿ ಸ್ಪರ್ಶ ವೇಳೆ ಗವಿಗಂಗಾದರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯ ಪ್ರವೇಶ ಮಾಡಿದ ಸೂರ್ಯ ರಶ್ಮಿ ಮೊದಲು ನಂದಿಯನ್ನ ಸ್ಪರ್ಶಿಸಿದ. ದಕ್ಷಿಣಯಾನದಿಂದ ಉತ್ತರಯಾನ ಪಥ ಬದಲಾವಣೆ ಮಾಡುತ್ತಿರೋ ಸೂರ್ಯ ಗರ್ಭ ಗುಡಿಯ ಮುಂಭಾಗದಲ್ಲಿರೋ ಸ್ಪಟಿಕ ಲಿಂಗಕ್ಕೆ ಸ್ಪರ್ಶಿಸಿ ನಂತರ ಶಿವಲಿಂಗ ಪೀಠದ ಸ್ಪರ್ಶ ಮಾಡಿದ. ಬಳಿಕ ಸೂರ್ಯದೇವ ಈಶ್ವರನ ಪಾದ ಸ್ಪರ್ಶ ಮಾಡಿದನು. ಲಿಂಗಭಾಗದಲ್ಲಿ 18 ಸೆಕೆಂಡ್‌ಗಳ ಕಾಲ ಸೂರ್ಯರಶ್ಮಿ ಬಿದ್ದಿದೆ.

ದೇವಸ್ಥಾನದಲ್ಲಿ ಬೆಳಗ್ಗೆ 5 ಗಂಟೆಗೆ ವಿಶೇಷಪೂಜೆ, ಅಲಂಕಾರ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ  ಓಪನ್‌ ಮಾಡಲಾಗಿತ್ತು. ಭಕ್ತಾದಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿದೆ. ದೇವರನ್ನ ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಅರ್ಚಕರನ್ನ ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಪ್ರವೇಶವಿರಲಿಲ್ಲ.

ಗವಿಗಂಗಾಧರೇಶ್ವರ ದೇವಾಲಯವನ್ನು ಇಂದು ಮಧ್ಯಾಹ್ನ 1.45ಕ್ಕೆ ಅರ್ಚಕ ವೃಂದವು ಸಾರ್ವಜನಿಕ ದರ್ಶನಕ್ಕೆ ಬಂದ್ ಮಾಡಿತ್ತು. ಸೂರ್ಯ ರಶ್ಮಿ ಸ್ಪರ್ಶದ ಬಳಿಕ ಪೂಜೆ ಸಲ್ಲಿಕೆ ಮಾಡಿ ಸಂಜೆ 6 ಗಂಟೆ ನಂತರ ಮತ್ತೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ರಾತ್ರಿ 11 ರವರೆಗೂ ಭಕ್ತರು ದೇವರ ದರ್ಶನ ಪಡೆಯಬಹುದು.

Share This Article