ಮಗನನ್ನ ಎಂಪಿ ಮಾಡುವ ಬದಲು ಸೈನಿಕ ಆಗು ಎನ್ನಬೇಕಿತ್ತು: ಸಿಎಂ ವಿರುದ್ಧ ಸುಮಲತಾ ಗರಂ

Public TV
1 Min Read

ಮಂಡ್ಯ: ನಮ್ಮ ದೇಶ ಕಾಯುವ ವೀರ ಯೋಧರು ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಅಂತ ಹೇಳಿಕೆ ನೀಡಿ ಬಳಿಕ ನಾನು ಆ ಅರ್ಥದಲ್ಲಿ ಹೇಳಿಲ್ಲ, ನಾನು ದೇಶಭಕ್ತ ಅಂತ ಸಿಎಂ ಹೇಳ್ತಾರೆ. ಅವರಿಗೆ ಅಷ್ಟೊಂದು ದೇಶಭಕ್ತಿ ಇದ್ದಿದ್ದರೆ ಮಗನನ್ನು ಎಂಪಿ ಮಾಡೋ ಬದಲು ಸೈನಿಕ ಆಗು ಎನ್ನಬೇಕಿತ್ತು ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಂಡ್ಯದ ಹಲಗೂರಿನಲ್ಲಿ ಪ್ರಚಾರ ನಡೆಸುತ್ತಾ ಜನರನ್ನುದ್ದೇಶಿಸಿ ಮಾತನಾಡಿ, ನಡೆಯುತ್ತಿರುವ ಚುನಾವಣೆ ಇತಿಹಾಸ ಎನ್ನಬಹುದು. ಆದ್ರೆ ಒಳ್ಳೆ ವಿಚಾರಕ್ಕೆ ಇದು ಇತಿಹಾಸವಲ್ಲ. ಬೇರೆ ಬೇರೆ ರೀತಿಯ ಇತಿಹಾಸವನ್ನ ಇಲ್ಲಿ ನೋಡ್ತಿದ್ದೀವಿ. ಹೆಣ್ಣಮಕ್ಕಳ ಬಗ್ಗೆ ನಮ್ಮ ವಿರೋಧವಿರುವ ಪಕ್ಷದವರು ಆಡಿದ ಕೀಳು ಮಾತುಗಳನ್ನ ನೋಡ್ತಿದ್ದೀವಿ. ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ರೈತರ ಬಗ್ಗೆ ಕಾಳಜಿಯಿಲ್ಲದೆ ಬರಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ನಮ್ಮ ದೇಶ ಕಾಯುವ ಯೋಧರು ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಅಂತ ಸಿಎಂ ಹೇಳಿದ್ದಾರೆ. ಬಳಿಕ ತಾವು ಆ ಅರ್ಥದಲ್ಲಿ ಮಾತನಾಡಿಲ್ಲ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ತಾವೂ ದೇಶಭಕ್ತ ಅನ್ನುವ ಅವರು ತಮ್ಮ ಮಗನನ್ನು ಎಂಪಿ ಮಾಡುವ ಬದಲು ಸೈನಿಕ ಆಗು ಅಂತ ಹೇಳಬೇಕಿತ್ತು ಎಂದು ಟಾಂಗ್ ಕೊಟ್ಟರು.

ಮುಖ್ಯಮಂತ್ರಿಗಳ ಬಾಯಲ್ಲಿ ತುಚ್ಛವಾದ ಮಾತುಗಳು ಬರುತ್ತಿದೆ. ಯಾರ ಬಗ್ಗೆ ಇವರಿಗೆ ಗೌರವವಿದೆ? ಮಹಿಳೆಯರ ಬಗ್ಗೆ ಗೌರವವಿಲ್ಲ, ರೈತರ ಬಗ್ಗೆ ಕಾಳಜಿಯಿಲ್ಲ, ಯೋಧರ ಬಗ್ಗೆ ಲಘುವಾದ ಮಾತುಗಳನ್ನು ಆಡುತ್ತಾರೆ. ಯೋಧರ ಬಗ್ಗೆ ಸಮಾಜದಲ್ಲಿ ಎಂಥ ಗೌರವವಿದೆ, ಇವರಿಗೇನಾದ್ರು ಗೊತ್ತಿದ್ಯ? ಒಬ್ಬಳೇ ಒಬ್ಬಳು ಹೆಣ್ಣು ಮಗಳು ಇಡೀ ವ್ಯವಸ್ಥೆಯನ್ನ ಎದುರು ಹಾಕಿಕೊಂಡು ನಿಂತಿದ್ದೀನಿ. ನನಗೊಂದು ಅವಕಾಶ ಕೊಡಿ, ಜನರಿಗಾಗಿ ಕೆಲಸ ಮಾಡುತ್ತೇನೆ ಅಂತ ಮತದಾರರಲ್ಲಿ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *