ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

Public TV
1 Min Read

ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿದ ಸುಮಲತಾ ಅಂಬರೀಶ್ (Sumalatha Ambarish) ಪುತ್ರ ಅಭಿಷೇಕ್ ಮದುವೆಗೆ (Marriage) ಆಹ್ವಾನಿಸಿದ್ದಾರೆ. ರಾಜಕಾರಣ ಬದಿಗಿಟ್ಟು ನೂತನ ಸಿಎಂ ಆಗಿ ಆಯ್ಕೆಯಾಗಿದ್ದಕ್ಕೆ ಸಿದ್ಧರಾಮಯ್ಯ ಅವರಿಗೆ ಅಭಿನಂದಿಸಿದ್ದಾರೆ. ಈ ಭೇಟಿಯ ವಿಚಾರವನ್ನು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ (Sandalwood) ನಟ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ಪುತ್ರ ಅಭಿಷೇಕ್ ಮದುವೆಗೆ ದಿನಗಣನೆ ಶುರುವಾಗಿದೆ. ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದೆ. ಅಂಬಿ ಪುತ್ರನ ಮದುವೆ ಯಾವಾಗ? ಎಲ್ಲಿ ಮದುವೆ ನಡೆಯಲಿದೆ. ಆಮಂತ್ರಣ ಪತ್ರಿಕೆ ಹೇಗಿದೆ.? ಈ ಎಲ್ಲಾ ಡಿಟೈಲ್ಸ್ ಇಲ್ಲಿದೆ.

ಅಭಿಷೇಕ್ ಅಂಬರೀಶ್ (Abhishek), ಮಾಡೆಲ್ ಅವಿವ ಬಿಡಪ (Aviva) ಮದುವೆಗೆ ಮುಹೂರ್ತ ನಿಗದಿ ಆಗಿದೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅಭಿಷೇಕ್- ಅವಿವ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಇವರ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿಗಾಗಿ ನಟಿ ಅನುಷ್ಕಾ ಶರ್ಮಾ ಗಟ್ಟಿ ನಿರ್ಧಾರ

2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

ಸಿನಿಮಾ- ರಾಜಕೀಯ ಎರಡೂ ಕ್ಷೇತ್ರದ ಗಣ್ಯರು ಅಭಿಷೇಕ್- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಹೊಸ ಬಾಳಿಗೆ ಕಾಲಿಡುತ್ತಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

Share This Article