ಒಂದು ವಿಡಿಯೋ ನೋಡ್ಕೊಳ್ಳಕ್ಕಾಗದವರು ಅನ್ಯಾಯ ಹೇಗೆ ತಡೀತಾರೆ: ಡಿಸಿ ವಿರುದ್ಧ ಸುಮಲತಾ ಕಿಡಿ

Public TV
3 Min Read

– ಮಂಜುಶ್ರೀ ಡಿಸಿಯಾಗಿದ್ದರೆ ನ್ಯಾಯಯುತ ಚುನಾವಣೆ ನಡೆಯಲ್ಲ

ಮಂಡ್ಯ: ಒಂದು ವಿಡಿಯೋ ನೋಡಿಕೊಳ್ಳಲು ಆಗದ ಜಿಲ್ಲಾಧಿಕಾರಿಗಳು, ಕ್ಷೇತ್ರದ 2,047 ಬೂತ್‍ಗಳಲ್ಲಿ ನನಗೆ ಆಗುವ ಅನ್ಯಾಯವನ್ನು ಹೇಗೆ ತಡೆಯುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪಶ್ನಿಸಿ, ಜಿಲ್ಲಾಧಿಕಾರಿ ಮಂಜುಶ್ರೀ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಚುನಾವಣಾ ಏಜೆಂಟ್ ಮದನ್ ಕುಮಾರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ 2,047 ಬೂತ್‍ಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಕೇವಲ ಒಂದು ವಿಡಿಯೋವನ್ನು ನೋಡಿಕೊಳ್ಳಲು ಆಗಲಿಲ್ಲ. ಈ ಮೂಲಕ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎನ್ನುವ ಸಂದೇಹ ನನ್ನಲ್ಲಿ ಮೂಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ನಾಮಪತ್ರ ಸಲ್ಲಿಸಿದ ನಂತರ ಕೆಲವು ಘಟನೆಗಳು ನಡೆದವು. ಈ ಕುರಿತು ನಾನು ಸಲ್ಲಿಸಿದ ಅನೇಕ ದೂರುಗಳಿಗೆ ಇಲ್ಲಿಯವರೆಗೂ ಸರಿಯಾದ ಮಾಹಿತಿಯೇ ಸಿಕ್ಕಿಲ್ಲ. ಇಂದು ಕೂಡ ಕೆಬಲ್ ಕಡಿತಗೊಳಿಸಿದ್ದಾರೆಂದು ಕೆಲವರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ವಿದ್ಯುತ್ ಕಡಿತ:
ಪಕ್ಷೇತರ ಅಭ್ಯರ್ಥಿಯಾಗಿ ನಾನು ಮಾರ್ಚ್ 20ರಂದು ನಾಮಪತ್ರ ಸಲ್ಲಿಸಿ, ಬೃಹತ್ ಸಮಾವೇಶ ನಡೆಸಿದ್ದೆ. ಈ ವೇಳೆ ನಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದನ್ನು ಯಾರು ಮಾಡಿದ್ದಾರೆ? ಉದ್ದೇಶಪೂರ್ವಕವಾಗಿ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಜನರಿಗೆ ಬಿಟ್ಟಿದ್ದೇನೆ. ಆದರೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ವಿದ್ಯುತ್ ಕಡಿತಗೊಳಿಸದಂತೆ ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದರು.

ವಿದ್ಯುತ್‍ಗಾಗಿ ಎಸ್‍ಪಿ ಪತ್ರ:
ನಿಖಿಲ್ ಕುಮಾರಸ್ವಾಮಿ ಮಾರ್ಚ್ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಅಂದು ವಿದ್ಯುತ್ ಕಡಿತಗೊಳಿಸಬಾರದು ಎಂದು ಎಸ್‍ಪಿ ಅವರು ಅಧಿಕೃತವಾಗಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಈ ವಿಚಾರವನ್ನು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಸೂಚನೆ ನೀಡುವ ಅಧಿಕಾರ ಅವರಿಗೆ ಇರುವುದಿಲ್ಲ. ಚುನಾವಣಾ ಪ್ರಚಾರಕ್ಕೆ ಸಿಎಂ ಬಂದಿದ್ದರೂ ನಾವು ಅವನರನ್ನು ಅಭ್ಯರ್ಥಿಯ ಪರ ಪ್ರಚಾರಕರು ಎಂದು ಭಾವಿಸುತ್ತೇವೆ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮಕೈಗೊಳ್ಳುತ್ತೇವೆ ಅಂತ ತಿಳಿಸಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ನಾವು ಸಮಾವೇಶ ನಡೆಸುತ್ತಿದ್ದಾಗ ವಿದ್ಯುತ್ ಕಡಿತಗೊಳಿಸಿ ಸಣ್ಣತನ ತೋರಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಟರೆ ಮುಂದೆ ನಮಗೆ ದೊಡ್ಡ ಮಟ್ಟದ ಹೊಡೆತ ಕೊಡುವ ಸಾಧ್ಯತೆಗಳಿವೆ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

ನಿಖಿಲ್ ಕ್ರಮಸಂಖ್ಯೆ ಘೋಷಣೆ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರದ ದಿನವೇ ಖುದ್ದು ಮುಖ್ಯಮಂತ್ರಿಗಳೇ ನಿಖಿಲ್ ಕ್ರಮ ಸಂಖ್ಯೆಯನ್ನು ಘೋಷಣೆ ಮಾಡಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನವೇ? ನನಗೆ 20ನೇ ಕ್ರಮ ಸಂಖ್ಯೆ ನೀಡಿದ್ದಾರೆ. ನನ್ನ ಹಿಂದೆ ಮುಂದೆ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಹಾಕಲಾಗಿದೆ. ಈ ಮೂಲಕ ಮತದಾರರಲ್ಲಿ ಗೊಂದಲ ಉಂಟುಮಾಡಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.

ಅಧಿಕಾರ ಇದೆ ಎಂದು ಏನೆಲ್ಲಾ ಮಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಐಟಿ ಕಚೇರಿ ಮುಂದೆ ಧರಣಿಗೆ ಕುಳಿತುಕೊಂಡರು. ನನ್ನ ಜೀವನದಲ್ಲಿ ಈ ತರಹದ ಮುಖ್ಯಮಂತ್ರಿಯನ್ನು ನೋಡಿಲ್ಲ. ಇಷ್ಟು ವರ್ಷ ಜನರಿಗೆ ಮೋಸ ಮಾಡಿ, ಮಣ್ಣೆರಚಿಕೊಂಡು ಬಂದಿದ್ದಾರೆ. ಮಂಡ್ಯದಲ್ಲಿ ಈಗ ಅದನ್ನೇ ಮಾಡುತ್ತಿದ್ದಾರೆ ಎಂದು ದೂರಿದರು.

ನಿಖಿಲ್ ಗೆಲುವಿಗೆ ಅಧಿಕಾರಿಗಳು ಕೆಲಸ:
ಮಂಡ್ಯ ಲೋಕಸಭಾ ಕ್ಷೇತ್ರದ 2,047 ಬೂತ್‍ಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಇರುತ್ತದೆ. ಒಂದು ವಿಡಿಯೋ ನೋಡಿಕೊಳ್ಳಲು ಆಗದ ಅವರು, ಮುಂದೆ ನನಗೆ ಆಗುವ ಅನ್ಯಾಯವನ್ನು ಹೇಗೆ ನೋಡಿಕೊಳ್ಳುತ್ತಾರೆ? ಸಿಎಂ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎನ್ನುವ ಸಂದೇಹ ಮೂಡುತ್ತಿದೆ ಎಂದು ಸುಮಲತಾ ಅಸಮಾಧಾನ ಹೊರ ಹಾಕಿದರು.

ಸಿಎಂ ಕುಮಾರಸ್ವಾಮಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಭಾವನೆ ಡಿಸಿ ಮಂಜುಶ್ರೀ ಅವರಿಗೆ ಇದ್ದರೆ ಗೌರವಯುತವಾಗಿ ತಮ್ಮ ಸ್ಥಾನ ಬಿಟ್ಟು ಹೋಗಬೇಕು. ಬೇರೆಯವರು ಬಂದು ಪ್ರಜಾಪ್ರಭುತ್ವದ ಗೌರವ ಕಾಪಾಡುತ್ತಾರೆ. ಮಂಜುಶ್ರೀ ಅವರೇ ಮಂಡ್ಯದ ಜಿಲ್ಲಾಧಿಕಾರಿಯಾಗಿದ್ದರೆ ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ. ನಾನು ಪ್ರಚಾರಕ್ಕೆ ಹೋದ ಎಲ್ಲ ಕಡೆಯಲ್ಲಿಯೂ ಚುನಾವಣಾ ಸಿಬ್ಬಂದಿ ವಿಡಿಯೋ ಮಾಡುತ್ತಾರೆ. ಆಗ ಮಾತ್ರ ಕ್ಯಾಮೆರಾ ಕೈ ಕೊಡಲ್ಲ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *