ನನ್ನನ್ನು ಬೆಂಬಲಿಸಿದವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ: ಸುಮಲತಾ

Public TV
3 Min Read

– ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಗೊತ್ತಾಗಬೇಕು
– ಯಾರೂ ಬೆಟ್ಟಿಂಗ್ ಕಟ್ಟಬೇಡಿ
– ಮಂಡ್ಯನೇ ನನಗೆ ಸಿಂಗಾಪುರ್

ಮಂಡ್ಯ: ನನ್ನ ಬೆಂಬಲಕ್ಕೆ ನಿಂತವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಗಿದಿದೆ. ಈಗ ನಮ್ಮ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಎಸ್‍ಪಿ (ಪೊಲೀಸ್ ಅಧೀಕ್ಷಕ) ಗಮನಕ್ಕೆ ತರುತ್ತೇನೆ. ನನ್ನ ಬೆಂಬಲಿಗರ ಪರವಾಗಿ ನಾನು ನಿಲ್ಲುತ್ತೇನೆ. ನನ್ನ ಪರವಾಗಿ ನಿಂತ ಚಿತ್ರನಟರು ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಇದರ ಅರ್ಥ ಏನು ಅಂತ ಗೊತ್ತಾಗಬೇಕು. ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಗೊತ್ತಾಗಬೇಕು ಎಂದು ಕಿಡಿಕಾರಿದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಯಾಕಪ್ಪ ಬೇಕಿತ್ತು ಅಂತ ಕೆಲವೊಮ್ಮೆ ಅನಿಸುತ್ತಿತ್ತು. ಆದರೆ ಜನರಿಗಾಗಿ ನನ್ನಲ್ಲಿ ನಾನೇ ಧೈರ್ಯ ತುಂಬಿಕೊಂಡು ಬಂದೆ. ಜಿಲ್ಲೆಯ ಜನರ ಜೊತೆ ಇರುವ ಸಲುವಾಗಿಯೇ ಚುನಾವಣೆಗೆ ಬಂದಿದ್ದೇನೆ. ನನಗೆ ರಾಜಕೀಯ ಬೇಕಿಲ್ಲ. ಆದರೆ ಜನರ ಜೊತೆ ಇರಲು ಒಳ್ಳೆ ಮಾರ್ಗ ಎಂದು ಅವರೇ ಸೂಚಿಸಿದರು. ಚುನಾವಣೆ ಬರುತ್ತದೆ ಹೋಗುತ್ತದೆ. ಅಂಬರೀಶ್ ಅವರ ಹೆಸರು ಬರೀ ಚುನಾವಣೆಗೆ ಸಂಬಂಧಿಸಿದ್ದಲ್ಲ. ನಾನು ಮಂಡ್ಯ ಜನರ ಜೊತೆ ಇರುತ್ತೇನೆ. ಮಂಡ್ಯವೇ ನನಗೆ ಸಿಂಗಾಪುರ್ ಎಂದು ಹೇಳಿದರು.

ಅಂಬರೀಶ್ ಅವರ ಪಾರ್ಥಿವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕು ಅಂದು ಕೊಂಡಿದ್ದೇವು. ತೆಗೆದುಕೊಂಡು ಹೋಗುವುದು ಹೇಳೋಕಾಗಲ್ಲ. ಬಸ್ ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದರು. ಆದರೆ ಅದರ ಈಗ ಬಗ್ಗೆ ಮಾತನಾಡಿದರು. ಯಾವುದು ಸುಳ್ಳು, ಸತ್ಯ ಜನರಿಗೆ ಗೊತ್ತಿದೆ. ಮೇ 29ರಂದು ಅಂಬರೀಶ್ ಜನ್ಮದಿನ. ಅದನ್ನು ಮಂಡ್ಯದಲ್ಲೇ ಮಾಡುತ್ತೇನೆ ಎಂದು ತಿಳಿಸಿದರು.

ಜಾತಿ ರಾಜಕಾರಣಕ್ಕೆ ನನ್ನ ವಿರೋಧವಿದೆ. ಗೌಡ್ತಿ ಅಲ್ಲ ಎಂಬುದನ್ನು ಒಪ್ಪಲ್ಲ, ಖಂಡಿಸುತ್ತೇನೆ. ಜನ ಅವರ ಮಾತನ್ನು ಒಪ್ಪಲ್ಲ ಎಂದು ಸಂಸದ ಶಿವರಾಮೇಗೌಡ ವಿರುದ್ಧ ಕಿಡಿಕಾರಿದರು.

ನಾನು 15 ವರ್ಷದವಳಿದ್ದಾಗ ಸಿನಿಮಾಗೆ ಬಂದೆ. ಕುಟುಂಬದ ಜವಾಬ್ದಾರಿ ಇತ್ತು. ನಂತರ ಪತ್ನಿಯಾಗಿ, ತಾಯಿಯಾಗಿ ಜವಾಬ್ದಾರಿ ನಿಭಾಯಿಸಿದೆ. ತಾಯಿಗಿಂತ ದೊಡ್ಡ ಜವಾಬ್ದಾರಿ ಯಾವುದೂ ಇಲ್ಲ. ಅವರು ಮತ್ತು ಮಗನನ್ನು ನೋಡಿಕೊಳ್ಳಬೇಕಿತ್ತು. ಯಾವಾಗ ಅಂಬರೀಷ್ ಇಲ್ಲ ಎಂದು ಮಂಡ್ಯ ಜನರು ಬಂದರೋ ಆಗ ಇಲ್ಲಿಗೆ ಬರಬೇಕಾಯಿತು ಎಂದು ತಿಳಿಸಿದರು.

ಕನಗನಮರಡಿ ಬಸ್ ದುರಂತದಲ್ಲಿ ಮಡಿದವರಿಗೆ ಕಿರು ಕಾಣಿಕೆ ನೀಡಿದ್ದೇವೆ. ಇದನ್ನು ಪ್ರಚಾರಕ್ಕೆ ಹೇಳಿಕೊಳ್ಳುವುದು ತಪ್ಪು. ಇದರಿಂದ ಜನರಿಗೆ ಏನು ಉಪಯೋಗ? ಹೀಗಾಗಿ ನಾನು ಇದರ ಬಗ್ಗೆ ಮಾತನಾಡಲಿಲ್ಲ. ಹಣದ ಹೊಳೆ ಹರಿಯುತ್ತಿದ್ದು ನಿಜ ಎನ್ನುವುದು ಗೊತ್ತಾಗಿತ್ತು. ದುಡ್ಡು ತೆಗೆದುಕೊಂಡು ವೋಟ್ ಹಾಕೋದು ಬೇಡ ಅಂತ ಜನರ ಬಳಿ ಕೇಳಿಕೊಂಡೆ ಎಂದರು.

ಯಾರ ಸ್ವಭಾವ ಏನು ಎನ್ನುವುದು ಜನರಿಗೆ ಗೊತ್ತಿದೆ. ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂಬುದು ಕೇಳಿ ಬರುತ್ತಿದೆ. ಯಾರೂ ರಿಸ್ಕ್ ತೆಗೆದುಕೊಳ್ಳಬೇಡಿ. ಬೆಟ್ಟಿಂಗ್ ಒಳ್ಳೆಯ ವಿಷಯವಲ್ಲ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಗೊತ್ತಿಲ್ಲ. ಬೆಟ್ಟಿಂಗ್ ಕಟ್ಟಬೇಡಿ ಎಂದು ಮನವಿ ಮಾಡಿಕೊಂಡರು.

ಮಂಡ್ಯ ಜಿಲ್ಲೆಯ ಕ್ಷೇತ್ರದ್ಯಾಂತ ಬೆಂಬಲ ಹಾಗೂ ಜನರ ಪ್ರೀತಿ ಸಿಕ್ಕಿದೆ. ಹೀಗಾಗಿ ಎಲ್ಲರನ್ನೂ ಸ್ಮರಿಸುವುದು ಕರ್ತವ್ಯ. ಕಾಂಗ್ರೆಸ್ ಪಕ್ಷದವರು ಮೊದಲ ಹೆಜ್ಜೆ ಇಡಲು ಸ್ಫೂರ್ತಿ ನೀಡಿದ್ದಾರೆ. ಅವರಿಗೆ ವಂದನೆ. ರೈತ ಸಂಘ, ಬಿಜೆಪಿ ನನಗೆ ಶಕ್ತಿ ತುಂಬಿ ನನ್ನ ಹೋರಾಟವನ್ನು ಬಲಿಷ್ಠಗೊಳಿಸಿತು. ದಲಿತ ಸಂಘಟನೆ, ಕನ್ನಡಪರ ಹೋರಾಟಗಾರರು, ಮುಸ್ಲಿಂ ಸಮುದಾಯ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.

ನಟರಾದ ದರ್ಶನ್, ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್, ಅಭಿಷೇಕ್ ಮತ್ತು ನನ್ನ ಅಭಿಮಾನಿಗಳಿಗೆ ವಂದನೆ. ಕೆಪಿಸಿಸಿ ಸದಸ್ಯ ಸಚ್ಚಿದಾನಂದ, ಪ್ರಸನ್ನ, ರಾಜೀವ್, ಅರವಿಂದ್ ಸೇರಿದಂತೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡವರು, ಶೇ.80ರಷ್ಟು ಮತದಾನ ಮಾಡಿದವರಿಗೆ ವಂದನೆ. ಆದರೆ ಬೆಂಗಳೂರು ನಗರದಲ್ಲಿ ಎಲ್ಲ ಸೌಲಭ್ಯ ಇದ್ದರೂ ಮತದಾನ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಯಚೂರಿನ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರವು ನ್ಯಾಯ ದೊರಕಿಸಿಕೊಡಬೇಕು. ಆದಷ್ಟು ಬೇಗ ನೊಂದ ಕುಟುಂಬಕ್ಕೆ ಸಾಂತ್ವನ ನೀಡಬೇಕು. ಮೃತ ವಿದ್ಯಾರ್ಥಿನಿಗೆ ಸಂತಾಪ ಸೂಚಿಸುತ್ತೇನೆ. ನ್ಯಾಯ ಮತ್ತು ಅನ್ಯಾಯದ ಹೋರಾಟವಿದು. ಮಾಧ್ಯಮಗಳು ಉತ್ತಮವಾದ ಕೆಲಸ ಮಾಡಿವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *