ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇಂದು ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಜನರಲ್ಲಿ ಮನವಿ ಕೂಡ ಮಾಡಿಕೊಂಡರು.
ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ ಅವರು, ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಮಾತುಗಳನ್ನು ಹೇಳುವುದು ಬೇಡ ಎಂದು ಮನವಿ ಮಾಡಿಕೊಂಡರು.
ಯಾರು ಯಾರಿಗೂ ನೋಯಿಸುವಂತಹ ಮಾತುಗಳನ್ನು ಆಡುವ ಅಗತ್ಯವಿಲ್ಲ. ರಾಜಕಾರಣ ಇರಬಹುದು ಅಥವಾ ಚುನಾವಣೆ ಇರಬಹುದು. ಜನಕ್ಕೆ ಏನೇನು ಒಳ್ಳೆಯದನ್ನು ಮಾಡಬೇಕು ಎಂಬುದರ ಬಗ್ಗೆ ಮಾತಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ನೋವು ಕೊಡುವಂತಹ ಮಾತುಗಳು ಬೇಕಾಗಿಯೇ ಇಲ್ಲ. ಯುವಕರಿಗೆ ಮಾರ್ಗದರ್ಶನವಾಗಿ ನಿಂತುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಅಂದ್ರು.
ನನ್ನ ಜೊತೆ ಇಂದು ಚಿತ್ರರಂಗ ಯಾಕೆ ನಿಂತಿದೆ ಅಂದ್ರೆ ನಮ್ಮಲ್ಲಿ ಒಗ್ಗಟ್ಟಿದೆ. ಹೀಗಾಗಿ ದರ್ಶನ್, ಯಶ್, ಪುನೀತ್ ಹಾಗೂ ದೊಡ್ಡಣ್ಣ ನಿಂತಿದ್ದಾರೆ. ಎಲ್ಲರ ಸಿನಿಮಾ ವಿಚಾರದಲ್ಲಿ ಸ್ಪರ್ಧೆ ಇರುತ್ತದೆ. ಆದ್ರೆ ನಾವು ವೈರಿಗಳಲ್ಲ ಎಂದು ತೋರಿಸೋಕೆ ಇಂದು ನಿಮ್ಮ ಮುಂದೆ ನಾವೆಲ್ಲ ಕೂತಿರೋದೇ ನಿದರ್ಶನವಾಗಿದೆ. ಹಾಗೆಯೇ ರಾಜಕಾರಣದಲ್ಲಿಯೂ ನಾವೇನು ವೈರಿಗಳಾಗಬೇಕಿಲ್ಲ. ಎಲ್ಲಾ ಒತ್ತಡಗಳಿಂದಲೂ ಒಂದು ಚುನಾವಣೆಯಲ್ಲಿ ನಾವು ಫೈಟ್ ಮಾಡಬಹುದು ಅನ್ನೋದನ್ನು ತೋರಿಸೋಣ. ಇದೇ ಒಂದು ಮೊದಲ ಹೆಜ್ಜೆಯಾಗಲಿ ಅನ್ನೋದು ನನ್ನ ಆಸೆಯಾಗಿದೆ ಅಂದ್ರು.
ನನ್ನ ಬೆನ್ನೆಲುಬಾಗಿ ನಿಂತು ನನಗೆ ಧೈರ್ಯ ಕೊಟ್ಟಿರುವ ನನ್ನ ಕುಟುಂಬ, ದೇವರು ಕೊಟ್ಟಂತಹ ನನ್ನ ಸಹೋದರ ರಾಕ್ ಲೈನ್ ವೆಂಕಟೇಶ್, ಯಾವತ್ತೂ ದೊಡ್ಡ ಮಗನಂತಿರುವ ದರ್ಶನ್, ನೀವು ನನ್ನನ್ನು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ, ಎಂತಹ ವಿಚಾರದಲ್ಲಿಯೂ ಮನವಿ ಎನ್ನುವ ಪದವನ್ನು ಬಳಸಬಾರದು. ನೀವು ಏನೇ ಕೇಳಿದ್ರೂ ನಾನು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಯಶ್ ನಮ್ಮ ಮನೆ ಮಗನಾಗಿದ್ದು, ಅಂಬರೀಶ್ ಅವರಿಗೆ ತುಂಬಾ ಪ್ರೀತಿ. ನೀವೇನು ನಮ್ಮನ್ನು ಕರೆಯೋದು, ನಾನು ಬಂದು ಏನು ಮಾಡಬೇಕು ಎಂದು ನಿಮ್ಮನ್ನು ಕೇಳಬೇಕು ಅನ್ನೋ ಮಾತು ಹೇಳಿದ್ರು. ಇಂತಹ ಒಂದು ಕುಟುಂಬ, ಇಂತಹ ಮಕ್ಕಳು ಪಡೆಯಲು ನಾನು ಪುಣ್ಯ ಮಾಡಿರಬೇಕು ಎಂದರು.