ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಇಂದು 200ಕ್ಕೂ ಹೆಚ್ಚು ಅಭಿಮಾನಿಗಳು ನಗರದ ಗಾಲ್ಫ್ ಕೋರ್ಸ್ ಬಳಿಯ ನಿವಾಸದಲ್ಲಿ ಸುಮಲತಾ ಅವರ ಭೇಟಿಗೆ ಆಗಮಿಸಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದಾರೆ.

ಪಕ್ಷದ ಮುಖಂಡರು ಸುಮಲತಾ ಅವರ ಬಳಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳಲ್ಲೆ ಗೊಂದಲವುಂಟಾಗಿದ್ದು, ಕೆಲ ಅಭಿಮಾನಿಗಳು ಪಕ್ಷೇತರರಾಗಿಯಾದರು ನಿಲ್ಲಿ ನಾವು ನಿಮ್ಮನ್ನು ಗೆಲ್ಲಿಸ್ತೀವಿ ಎಂದು ಕೂಗುತ್ತಿದ್ದರು. ದೇವೇಗೌಡರು ಅಂಬರೀಶಣ್ಣನ ಮಗ ಎಂದು ಹೇಳುತ್ತಿದ್ದರು. ಮೈತ್ರಿಕೂಟದ ಅಭ್ಯರ್ಥಿಯಾಗಿ ಅಂಬರೀಶ್ ಕುಟುಂಬದವರನ್ನೆ ಕಣಕ್ಕೆ ಇಳಿಸಬೇಕು. ದೇವೇಗೌಡರು ಈ ಬಾರಿ ಸಹಕಾರ ನೀಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡರು. ಈ ವೇಳೆ ರಾಕ್‍ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಉಪಸ್ಥಿತರಿದ್ದರು.

ನಿಮ್ಮ ಪ್ರೀತಿಗೆ ಬೆಲೆ ಕಟ್ಟೋಕ್ಕಾಗಲ್ಲ:
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, “ಅಂಬರೀಶ್ ಅವರನ್ನು ಕಳೆದುಕೊಂಡಾಗ ನಮಗೆ ಆದ ನೋವಿಗಿಂತ 100 ಪಟ್ಟು ಹೆಚ್ಚು ನೋವು ನಿಮಗಾಗಿದೆ. ಅಭಿಮಾನಿಗಳೆಲ್ಲ ಸಂಬಂಧವನ್ನು ಬಿಟ್ಟುಕೊಡಬಾರದು ಎಂದು ಅಭಿಮಾನ ಇಟ್ಟುಕೊಂಡು ಬಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನನಗೆ ಇದೇ ರೀತಿಯ ಒತ್ತಡ ಬರುತ್ತಿದೆ. ಈ ಪ್ರೀತಿಯೇ ಅಂಬಿ ಅವರು ಸಂಪಾದಿಸಿದ ಆಸ್ತಿ. ನನಗೆ ಇದನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಇಲ್ಲ. ಅವರು ಇದ್ದಾಗ ಇದೇ ಪ್ರೀತಿ ಇತ್ತು. ಅವರು ಇಲ್ಲದಾಗಲು ಇಷ್ಟು ಪ್ರೀತಿ ಇದೆ ಅಂದರೆ ಅದಕ್ಕೆ ಬೆಲೆ ಕಟ್ಟೋಕೆ ಆಗಲ್ಲ” ಎಂದು ಹೇಳಿದ್ದಾರೆ.

ಚರ್ಚಿಸಿ, ತೀರ್ಮಾನಕ್ಕೆ ಬರುವೆ:
ನನಗೆ ಎಂದಿಗೂ ಪದವಿ ಅಥವಾ ರಾಜಕೀಯದ ಆಸೆ ಇರಲಿಲ್ಲ. ಹಾಗಾಗಿ ನಾನು ಸ್ವಲ್ಪ ಯೋಚಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ನಾನು ದುಡುಕಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಅಂಬರೀಶ್ ಅವರು ಇದ್ದಾಗ ಶಕ್ತಿ ಬೇರೆ, ನೀವು ಇರುವಾಗ ನಿಮ್ಮ ಶಕ್ತಿನೇ ಬೇರೆ. ರಾಜಕೀಯ ಚುನಾವಣೆ ಅಷ್ಟು ಸುಲಭ ಅಲ್ಲ. ಹಾಗಾಗಿ ನಾನು ಎಲ್ಲವನ್ನು ಚರ್ಚೆ ಮಾಡಿ ಒಂದೊಳ್ಳೆ ತೀರ್ಮಾನ ಕೈಗೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿಯನ್ನು ನಾನು ಕಳೆದುಕೊಳ್ಳುವುದಿಲ್ಲ. ಈ ಜನ್ಮ ಇರೂವವರೆಗೆ ನಮ್ಮ ಸೇವೆ ಮಂಡ್ಯಕ್ಕೆ ಇರುತ್ತದೆ. ನಾನು ಹಾಗೂ ಅಭಿಷೇಕ್ ಮಂಡ್ಯವನ್ನು ಮರಿಯೋಕೆ ಸಾಧ್ಯವೇ ಇಲ್ಲ ಎಂದರು.

ಮಂಡ್ಯದಿಂದ್ಲೇ ಸ್ಪರ್ಧೆ:
ನನಗೆ ರಾಜಕೀಯಕ್ಕೆ ಬರುವ ಯೋಚನೆ ಮೊದಲಿಂದ ಇರಲಿಲ್ಲ. ಆಕಸ್ಮಾತ್ ನಾನು ರಾಜಕೀಯಕ್ಕೆ ಬಂದರೆ ಅದು ಮಂಡ್ಯದಿಂದ ಬರುತ್ತೇನೆ. ನಾನು ಯಾವುದೇ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ ಹಾಗೂ ಯಾರು ಕೂಡ ನನ್ನನ್ನು ಸಂಪರ್ಕಿಸಿಲ್ಲ. ಅಂಬರೀಶ್ ಅವರು ಕಾಂಗ್ರೆಸ್ ನಲ್ಲಿ ಇದ್ದರು. ಹಾಗಾಗಿ ನಾವು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಬೇಕು. ನಾನು ಏನೋ ಮಾತನಾಡಿ ವಿವಾದ ಮಾಡಿಕೊಳ್ಳಲು ಇಷ್ಟಪಡಲ್ಲ. ನಾವು ಇಲ್ಲಿ ಯಾರಿಗೂ ಚಾಲೆಂಜ್ ಮಾಡುವುದಿಲ್ಲ ಹಾಗೂ ಯಾರ ವಿರುದ್ಧವೂ ನಾವು ಹೋಗಲ್ಲ. ಆದರೆ ಅಭಿಮಾನಿಗಳ ಪ್ರೀತಿಗೆ ಖಂಡಿತ ಬೆಲೆ ಕೊಡುತ್ತೇನೆ. ಈ ಪ್ರೀತಿ ಕಳೆದುಕೊಳ್ಳುವುದಕ್ಕೆ ಇಷ್ಟಪಡಲ್ಲ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *