ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

Public TV
1 Min Read

ಬೆಂಗಳೂರು: ಅಪಾರ ಅಭಿಮಾನಿ ಬಳಗವನ್ನು ಹೊಂದಿರುವವರು ಸುಮಲತಾ ಅಂಬರೀಶ್. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರೋ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ತಾಯಿಯಾಗಿ ನಟಿಸಿದ್ದರು. ಇದೀಗ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಅಮ್ಮನಾಗಿ ಭಾವನಾತ್ಮಕವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ನಿರ್ದೇಶಕ ಶಂಕರ್ ಜೆ ಕಥೆ ಬರೆಯೋ ಸಂದರ್ಭದಲ್ಲಿ ತಾವು ಸೃಷ್ಟಿಸಿದ ಪಾತ್ರಗಳಿಗೆ ಯಾವುದೇ ಕಲಾವಿದರನ್ನು ಕಲ್ಪಿಸಿಕೊಂಡಿರಲಿಲ್ಲವಂತೆ. ಕಥೆ ಬರೆದು, ಸ್ಕ್ರಿಪ್ಟ್ ರೆಡಿಯಾದ ನಂತರವಷ್ಟೇ ಪಾತ್ರಗಳಿಗೆ ಕಲಾವಿದರ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ಇಡೀ ಕಥೆಯ ಜೀವಾಳದಂತಿರೋ ತಾಯಿಯ ಪಾತ್ರಕ್ಕೆ ಸುಮಲತಾ ಅಂಬರೀಶ್ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರಂತೆ.

ನಿರ್ದೇಶಕರು ಇಂಥಾದ್ದೊಂದು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸುಮಲತಾ ಅವರು ಬ್ಯುಸಿಯಾಗಿ ಬಿಟ್ಟಿದ್ದರು. ಆಗ ಚಿತ್ರವೊಂದರ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದರಂತೆ. ಈ ನಡುವೆಯೇ ಶಂಕರ್ ಕಥೆ ಮತ್ತು ಅಮ್ಮನ ಪಾತ್ರದ ಮಹತ್ವವನ್ನು ವಿವರಿಸಿ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆದ ಸುಮಲತಾ ತಮ್ಮ ಪಾತ್ರವನ್ನೂ ಮೆಚ್ಚಿಕೊಂಡು ಆಗಲೇ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಈ ಚಿತ್ರದಲ್ಲವರು ತಾಯಿಯ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.

ಇದೀಗ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೇ ತಿಂಗಳ ಇಪ್ಪತ್ಮೂರರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಅದಾದ ಮಾರನೇ ದಿನವೇ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರ ಪಾತ್ರ ನಿಜಕ್ಕೂ ಹೇಗಿದೆ ಎಂಬ ಕುತೂಹಲವಂತೂ ಎಲ್ಲರಲ್ಲಿಯೂ ಇದ್ದೇ ಇದೆ.

Share This Article
Leave a Comment

Leave a Reply

Your email address will not be published. Required fields are marked *