ಸುಧಾಕರ್‌ಗೆ ಕೋಟ್ಯಂತರ ಹಣ ಎಲ್ಲಿಂದ ಬರುತ್ತೆ – ವಿ ಮುನಿಯಪ್ಪ ಕಿಡಿ

Public TV
1 Min Read

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಎಂಬಿಬಿಎಸ್ ಪಾಸ್ ಮಾಡಿದ್ದಾನೋ ಇಲ್ಲವೋ ಎಂಬ ಅನುಮಾನ ಇದೆ. ಸುಧಾಕರ್ ಗೆ ಕೋಟ್ಯಂತರ ರೂಪಾಯಿ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿ ಶಿಡ್ಲಘಟ್ಟ ಕಾಂಗ್ರೆಸ್ ಶಾಸಕ ವಿ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿಡ್ಲಘಟ್ಟ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಟ್ಡಿರುವ ದೊಡ್ಡ ಕಟ್ಟಡಕ್ಕೆ ತೆರಿಗೆ ಕಟ್ಟಿಲ್ಲ. ಕೋಟಿ ಕೋಟಿ ಖರ್ಚು ಮಾಡುವ ಸುಧಾಕರ್ ಗೆ ಹಣ ಎಲ್ಲಿಂದ ಬರುತ್ತದೆ. ಆದಾಯದ ಮೂಲವನ್ನ ಸುಧಾಕರ್ ಹೇಳಬೇಕು ಎಂದು ಆಗ್ರಹಿಸಿದರು.

20 ವರ್ಷದ ಹಿಂದೆ ಕಾಲೇಜು ಕಟ್ಟಿದರೂ ನಾನು ಈಗಲೂ ಹೀಗೆಯೇ ಇದ್ದೇನೆ. 2 ವರ್ಷದಲ್ಲಿ ಸುಧಾಕರ್ ದೊಡ್ಡ ಕಾಲೇಜು ನಿರ್ಮಿಸಿದ್ದು ಹೇಗೆ? ಸುಧಾಕರ್ ಇಡೀ ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಬೆಂಗಳೂರಿನಲ್ಲಿನ ಕುಟುಂಬ ಸದಸ್ಯರನ್ನೆಲ್ಲಾ ಗಣಿಗಾರಿಕೆಗೆ ಬಿಟ್ಟಿದ್ದಾರೆ. 100 ವರ್ಷದ ಗಣಿ ಸಂಪನ್ಮೂಲಗಳನ್ನು 2-3 ವರ್ಷಗಳಲ್ಲೇ ಬಾಚಿಕೊಂಡು ಹೋಗುತ್ತಿದ್ದಾರೆ. ಗಣಿಗಾರಿಕೆ ಮಾಡುವ ಪ್ರತಿಯೊಬ್ಬರು ಸುಧಾಕರ್ ಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಸುಧಾಕರ್ ಗೆ ಕೊಡಲೇಬೇಕು. ಇಂತಹ ಸುಧಾಕರ್ ನೈತಿಕತೆ ಬಗ್ಗೆ ಮಾತನಾಡೋದು ಎಷ್ಟು ಸರಿ ಬ್ಲಾಕ್ ಮೇಲ್ ಮಾತುಗಳನ್ನು ಮಾತಾಡೋದು ಸುಧಾಕರ್ ಬಿಡಬೇಕು. ಬ್ಲಾಕ್ ಮೇಲ್ ಮಾಡೋವರು ಎಲ್ಲರೂ ಮುಂದೆ ತೇಲಿ ಹೋಗಲಿದ್ದು, ಈಗಾಗಲೇ ಸುಧಾಕರ್ ಎಲ್ಲರ ಮುಂದೆ ತೇಲಿ ಹೋಗಿದ್ದಾರೆ ಎಂದು ಹೇಳಿ ಕಿಡಿ ಕಾರಿದರು.

ಯಡಿಯೂರಪ್ಪ ಒನ್ ಮ್ಯಾನ್ ಶೋ ಎಂಬಂತಾಗಿದ್ದು, ನೆರೆ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ನೆರೆಯಿಂದಾದ ಆಸ್ತ-ಪಾಸ್ತಿ ಹಾಗೂ ಪ್ರಾಣ ಹಾನಿ ಸೇರಿದಂತೆ ನೀರು ವ್ಯರ್ಥವಾಗುತ್ತಿರುವುದು ನೋಡಿದರೆ ನೋವಾಗುತ್ತದೆ. ಯಡಿಯೂರಪ್ಪ ಒಬ್ಬರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ದೆಹಲಿಗೆ ಹೋದರು. ನಂತರ ಬಂದ ಯಡಿಯೂರಪ್ಪ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನೇ ಪಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸಾರ್ವಜನಿಕರು ನೀಡುತ್ತಿರುವ ವಸ್ತುಗಳನ್ನು ಸಂತ್ರಸ್ತರಿಗೆ ನೀಡುತ್ತಾ ಸರ್ಕಾರ ಕಾಲ ಕಳಿಯುತ್ತಿದೆ. ಸರ್ಕಾರದ ಅನುದಾನವನ್ನು ಬಳಸುತ್ತಿಲ್ಲ. ಯಡಿಯೂರಪ್ಪ ಒನ್ ಮ್ಯಾನ್ ಶೋ ಮಾಡುತ್ತಿದ್ದಾರೆ. ಇಂತಹ ಸರ್ಕಾರದ ನಡೆ ಕಾರ್ಯವೈಖರಿ ಬಗ್ಗೆ ನನಗೆ ಬಹಳ ನೋವು ತಂದಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *