ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

Public TV
1 Min Read

– ಕರ್ನಾಟಕದಲ್ಲಿ ಈಗ 26 ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರತ
– ಮೇ ಅಂತ್ಯದೊಳಗೆ ರಾಜ್ಯದಲ್ಲಿ 60 ಕೋವಿಡ್ ಟೆಸ್ಟಿಂಗ್ ಲ್ಯಾಬ್

ಬೆಂಗಳೂರು: ಗದಗ, ತುಮಕೂರು ಮತ್ತು ವಿಜಯಪುರಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೀಗ 26 ಕೋವಿಡ್ ಟೆಸ್ಟಿಂಗ್ ಲ್ಯಾಬ್‍ಗಳು ಕಾರ್ಯ ನಿರ್ವಹಿಸುವಂತಾಗಿದೆ.

ರಾಜ್ಯದಲ್ಲಿ ಈಗ ದಿನಕ್ಕೆ 5,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಲಭ್ಯವಾದಂತಾಗಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಳ ಮತ್ತು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಪ್ರಸ್ತುತ ಆರ್.ಟಿ.ಪಿ.ಸಿ.ಆರ್ ಲ್ಯಾಬ್ – 15, ಸಿಬಿಎನ್‍ಎಎಟಿ – 03 ಮತ್ತು ಖಾಸಗಿಯ 08 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ.

ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಏಪ್ರಿಲ್ ಅಂತ್ಯದೊಳಗೆ ರಾಜ್ಯದಲ್ಲಿ 27 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಫೆಬ್ರವರಿ ಆರಂಭದಲ್ಲಿ 2 ಲ್ಯಾಬ್‍ಗಳಿದ್ದ ಕರ್ನಾಟಕದಲ್ಲಿ ಈಗ 26 ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು ಮೇ ಅಂತ್ಯದೊಳಗೆ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲಿವೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 2 ಪ್ರಯೋಗಾಲಯ ಹೊಂದುವುದು ಸರ್ಕಾರದ ಗುರಿ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಇದರಿಂದಾಗಿ ತ್ವರಿತ ಗತಿಯಲ್ಲಿ ಪಾಸಿಟೀವ್ ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಿಸಲು ಸಾಧ್ಯವಾಗುತ್ತಿದ್ದು, ರಾಜ್ಯದಲ್ಲಿ ಕೊರೋನ ವೈರಾಣು ಹರಡದಂತೆ ತಡೆಗಟ್ಟಲು ಇದು ಬಹಳ ಮಟ್ಟಿಗೆ ಸಹಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

4ಖಿ (ಟ್ರೇಸ್, ಟ್ರ್ಯಾಕ್, ಟೆಸ್ಟ್ ಮತ್ತು ಟ್ರೀಟ್) ಯೋಜನೆಯೊಂದಿಗೆ ಕರ್ನಾಟಕವು ಅತ್ಯಂತ ಸಮರ್ಥವಾಗಿ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದ್ದು ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದುವುದರಿಂದ ಹೆಚ್ಚು ಟೆಸ್ಟ್ ಗಳನ್ನು ಕಡಿಮೆ ಅವಧಿಯಲ್ಲಿ ನಡೆಸಬಹುದಾಗಿದೆ. ಇದರಿಂದ ಚಿಕಿತ್ಸೆಗೆ ಅನುಕೂಲವಾಗಿದ್ದು ಕೋವಿಡ್ ನಿಯಂತ್ರಿಸುವ ಮತ್ತು ಸೋಂಕಿತರನ್ನು ಗುಣಮುಖರನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *