ಗದಗ: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಪ್ರವಾಹಕ್ಕೊಳಗಾದ ಜಿಲ್ಲೆಯ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಸಂತ್ರಸ್ತರ ನೋವಿಗೆ ಸ್ಪಂದಿಸುವುದಾಗಿ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಧಾಮೂರ್ತಿ ಅವರು, ನೆರೆ ಸಂತ್ರಸ್ತರಿಗೆ ಸರ್ಕಾರ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಈಗಾಗಲೇ ನಾವು ಸುಮಾರು 5 ಕೋಟಿ ರೂ. ಸಾಮಾಗ್ರಿಗಳನ್ನು ಕರ್ನಾಟಕದಾದ್ಯಂತ ವಿತರಿಸಿದ್ದೇವೆ. ಸರ್ಕಾರ ಜಾಗ ತೋರಿಸಿದರೆ ನಾವು ಮನೆ ಕಟ್ಟಿ ಕೊಡುತ್ತೇವೆ. ಒಂದು ಮನೆಗೆ ಸುಮಾರು 10 ಲಕ್ಷ ರೂ. ಖರ್ಚು ಬರುತ್ತದೆ. ಆದ್ದರಿಂದ ಸರ್ಕಾರ ಈ ಜಾಗ ಇವರದ್ದು ಎಂದು ತೋರಿಸಿದರೆ ನಾವು ಕಟ್ಟಿಸಿಕೊಡುತ್ತೇವೆ ಎಂದು ಹೇಳಿದರು.
ಮಳೆ, ಪ್ರವಾಹ ಬಂದರೆ ಜನರು ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಸರ್ಕಾರ ಎಷ್ಟು ಸೈಟ್ ಕೊಡುತ್ತದೋ ಅದರ ಮೇಲೆ ಮನೆ ಕಟ್ಟುತ್ತೇವೆ. ಸರ್ಕಾರ ಈ ಜಾಗ ಇವರದ್ದೇ ಎಂದು ಹೇಳಿದ ಮೇಲೆ ಮನೆ ಕಟ್ಟುತ್ತೇವೆ. ನಾವು ಮನೆ ಕಟ್ಟಿದ ನಂತರ ಬೇಡ ಎಂದರೆ ಕಷ್ಟವಾಗುತ್ತದೆ. ಅದೇ ರೀತಿ ಸಂತ್ರಸ್ತರೂ ಕೂಡ ಈ ಜಾಗ ನಮ್ಮದು, ಈ ಮನೆಯಲ್ಲಿ ನಾವು ಇರುತ್ತೇವೆ ಎಂದು ಪತ್ರವೊಂದನ್ನು ಕೊಡಬೇಕು. ಇಲ್ಲವೆಂದರೆ ಎಷ್ಟೋ ಜನರು ನಾವು ಮನೆ ಕಟ್ಟಿದೆ ಮೇಲೆ ಇಲ್ಲಿ ಇರಲ್ಲ ಎಂದು ಹೇಳುತ್ತಾರೆ ಎಂದು ತಿಳಿಸಿದರು.
ಸರ್ಕಾರ ಅಧಿಕೃತ ಪತ್ರಕೊಟ್ಟರೆ ನಮ್ಮ ಪ್ಲ್ಯಾನ್ ಪ್ರಕಾರ ಮಾಡುತ್ತೇವೆ. ನಮ್ಮ ಗುತ್ತಿಗೆದಾರರೇ ಮನೆ ಕಟ್ಟುತ್ತಾರೆ. 10 ಕೋಟಿಗೆ 100 ಮನೆ ಕಟ್ಟಬಹುದು. ಅದೇ ರೀತಿ ಇನ್ನೂ 10 ಕೋಟಿ ಕೊಟ್ಟರೆ 200 ಮನೆ ನಿರ್ಮಾಣವಾಗುತ್ತದೆ ಎಂದು ಸುಧಾಮೂರ್ತಿ ಹೇಳಿದರು.