ಸುಧಾಮೂರ್ತಿ ಹೃದಯವಂತಿಕೆ ನನ್ನ ಹೃದಯ ತುಂಬಿತು: ಸುರೇಶ್ ಕುಮಾರ್

Public TV
1 Min Read

– ಕೊರೊನಾ ಚಿಕಿತ್ಸೆಯ ಸಹಾಯಕ್ಕೆ ಮುಂದಾದ ಇನ್ಫಿ ಅಧ್ಯಕ್ಷೆ

ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್‍ಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಈ ಸೋಂಕಿನಿಂದ ವೃದ್ಧನೊಬ್ಬ ಮೃತಪಟ್ಟಿರುವುದು ದೃಢವಾಗಿದೆ. ಇದೀಗ ಕೊರೊನಾ ವೈರಸ್ ಚಿಕಿತ್ಸೆಗೆ ತಮ್ಮ ಕೈಲಾದ ಸಹಾಯ ಮಾಡಲು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮುಂದಾಗಿದ್ದಾರೆ.

ಸುಧಾಮೂರ್ತಿ ಅವರ ಈ ಕಾಳಜಿಯ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಫೇಸ್‍ಬುಕ್ ಪೋಸ್ಟ್‌ನಲ್ಲಿ ಏನಿದೆ?
“ನಿನ್ನೆ ಬೆಳಗ್ಗೆ ನನಗೆ ಇನ್ಫೋಸಿಸ್ ಫೌಂಡೇಶನ್ ಕಛೇರಿಯಿಂದ ಕರೆ ಬಂದಿತ್ತು. ಸುಧಾಮೂರ್ತಿ ಅವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿ ಹೇಳಿದರು” ಎಂದರು.

ಅಷ್ಟೇ ಅಲ್ಲ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲುರೊಂದಿಗೂ ತಮ್ಮ ಈ ಪಾತ್ರದ ಕುರಿತು ಚರ್ಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಿದರು.

https://www.facebook.com/nimmasuresh/posts/3310452595648729

“ನಿನ್ನೆ ಸಂಜೆ ಸುಧಾಮೂರ್ತಿ ಅವರಿಗೆ ಫೋನ್ ಮಾಡಿ ನಮ್ಮ ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಹೃದಯವಂತಿಕೆ ನನ್ನ ಹೃದಯ ತುಂಬಿತು. ನಿಜವಾದ ಮಾತೃ ಕಾಳಜಿ ಈ ಮಹಾತಾಯಿಯದು” ಎಂದು ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ.

ಸುಧಾಮೂರ್ತಿ ಅವರು ಸರಳ ವ್ಯಕ್ತಿತ್ವ ಹೊಂದಿದ್ದು, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈ ಹಿಂದೆ ನೆರೆ ಸಂತ್ರಸ್ತರಿಗೆ ಕೋಟ್ಯಂತರ ಹಣದ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭಾರತದ ಯೋಧರ ನಿಧಿಗೂ ಅನುದಾನ ಮಾಡಿದ್ದಾರೆ. ಸದಾ ಸಾಮಾಜದ ಸೇವೆಗೆ ಮುಂದಾಗುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *