ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ನಟ ಸುದೀಪ್

Public TV
1 Min Read

ಹೆಸರಾಂತ ನಟ ದ್ವಾರಕೀಶ್ (Dwarakish) ನಿಧನಕ್ಕೆ ಕಂಬನಿ ಮಿಡಿದಿದ್ದ ಸುದೀಪ್ (Sudeep), ಇಂದು ಶೂಟಿಂಗ್ ಬ್ರೇಕ್ ಮಾಡಿ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ ಗಾಗಿ ಚೆನ್ನೈನಲ್ಲಿದ್ದ ಸುದೀಪ್, ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ದ್ವಾರಕೀಶ್ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಸುದೀಪ್ ಸಿನಿಮಾ ಮಾಡಿದ್ದರು. ವಿಷ್ಣುವರ್ಧನ್ ಹೆಸರಿನ ಈ ಸಿನಿಮಾ ದ್ವಾರಕೀಶ್ ಅವರ ಆರ್ಥಿಕ ಸ್ಥಿತಿಯನ್ನು ಚೇತರಿಕೆ ಕಾಣುವಂತೆ ಮಾಡಿತ್ತು.

ರವೀಂದ್ರ ಕಲಾಕ್ಷೇತ್ರದಲ್ಲಿ ಸದ್ಯ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ದ್ವಾರಕೀಶ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಟಿ.ಆರ್ ಮಿಲ್ ರುದ್ರಭೂಮಿಯಲ್ಲಿ ಮಾಡುವುದಾಗಿ ದ್ವಾರಕೀಶ್ ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ. ಬ್ರಾಹ್ಮಣರ ವಿಧಿ ವಿಧಾನದ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದ್ದು, ದ್ವಾರಕೀಶ್ ಅವರ ಹಿರಿಯ ಪುತ್ರ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ.

ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7 ಗಂಟೆಗೆ ಮನೆಯಲ್ಲಿ ಕಾರ್ಯಗಳು ನಡೆದಿವೆ. ಮನೆಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥೀವ ಶರೀರವನ್ನು ತರಲಾಗಿದ್ದು, ಅಭಿಮಾನಿಗಳು ಮತ್ತು ಕಲಾವಿದರು ಆಗಮಿಸಿ, ಅಂತಿಮ ದರ್ಶನ ಪಡೆಯುತ್ತಿದ್ದಾರೆ.

 

ದ್ವಾರಕೀಶ್ ಅವರ ಒಡನಾಟದ ಕುರಿತು ಅನೇಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದು, ದ್ವಾರಕೀಶ್ ಅವರ ನಿಧನಕ್ಕೆ ಹಿರಿಯ ನಿರ್ದೇಶಕ ಭಾರ್ಗವ್ ಕೂಡ ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್ ಅವರ ಸಂಬಂಧಿಯೂ ಆಗಿರುವ ಭಾರ್ಗವ್, ಅಗಲಿದ ದ್ವಾರಕೀಶ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ, ನಾನು ಮತ್ತು ದ್ವಾರಕೀಶ್ ಬಾಲ್ಯದ ಸ್ನೇಹಿತರು. ಸ್ಕೂಲ್ ಕಾಲೇಜು ಶಿಕ್ಷಣ ಒಟ್ಟಿಗೆ ಕಲಿತಿದ್ದೇವೆ. ಕಾಲೇಜು ದಿನಗಳಿಂದಾನೇ ದ್ವಾರಕೀಶ್ ಗೆ ನಟನಾ ಆಸಕ್ತಿ. ಅವ್ರ ಅಣ್ಣ ಮೈಸೂರಲ್ಲಿ ಅಂಗಡಿ ಹಾಕಿ ಕೊಟ್ಟಿದ್ರು. ಅಂಗಡಿ ಬಿಟ್ಟು ಬೆಂಗಳೂರಿಗೆ ನಟ ಆಗೋಕೆ ಬಂದ್ರು. ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನನ್ಗೆ ಅವ್ನು ಅನ್ನದಾತ ಅವ್ನಿಂದ್ಲೇ ನಾನು ಚಿತ್ರರಂಗಕ್ಕೆ ಬಂದೆ . ದ್ವಾರಕೀಶ್ ನನ್ ಗುರು ಅನ್ನದಾತ ಎಂದು ಭಾರ್ಗವ್ ಭಾವುಕ ಮಾತುಗಳನ್ನು ಆಡಿದ್ದಾರೆ.

Share This Article