ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ ಎಂದ ಕಿಚ್ಚ

Public TV
2 Min Read

ಬೆಂಗಳೂರು: ಉತ್ತರ ಕರ್ನಾಟಕ ಹಾಗೂ ರಾಜ್ಯದ ಇತರೇ ಜಿಲ್ಲೆಗಳು ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ ಎಂದು ಕಿಚ್ಚ ಸುದೀಪ್ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವರುಣನ ರೌದ್ರಾವತಾರಕ್ಕೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹಕ್ಕೆ ಲಕ್ಷಾಂತರ ಜನರು, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ನಮ್ಮ ಕೈಲಾದ ಸಹಾಯ ಮಾಡೋಣ ಎಂದು ಸುದೀಪ್ ಟ್ವಿಟ್ಟರ್ ಮೂಲಕ ಕೋರಿಕೊಂಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ನನ್ನ ಸ್ನೇಹಿತರ ಬಳಗಕ್ಕೆ ನನ್ನ ಕೋರಿಕೆ ಎಂದು ಬರೆದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಭೀಕರ ದೃಶ್ಯಾವಳಿಗಳು ಹಾಗೂ ಫೋಟೋಗಳನ್ನು ಮಾತ್ರ ನಾವು ನೋಡುತ್ತಿದ್ದೇವೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಜನಗಳು ಹೇಗಿದ್ದಾರೆ? ಎಲ್ಲಿದ್ದಾರೆ? ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದು ತಿಳಿಯುತ್ತಿಲ್ಲ. ಖಂಡಿತವಾಗಿಯು ಸರ್ಕಾರ ಈ ಬಗ್ಗೆ ಏನಾದರು ಮಾಡುತ್ತಿರುತ್ತೆ, ಸುಮ್ಮನೆ ಕುಳಿತಿರೋದಿಲ್ಲ. ಆದರೂ ಕೂಡ ಪ್ರವಾಹ ಉಂಟಾಗಿರುವ ಪ್ರದೇಶಗಳ ಅಕ್ಕ ಪಕ್ಕದಲ್ಲಿರೋ ನನ್ನ ಸ್ನೇಹಿತರ ಬಳಗಕ್ಕೆ ಒಂದು ಚಿಕ್ಕ ವಿನಂತಿ, ಆ ಜಾಗಕ್ಕೆ ನೀವು ಬೇಗ ತಲುಪಬಹುದು ಎಂಬ ಕಾರಣಕ್ಕೆ ಕೋರಿಕೊಳ್ಳುತ್ತಿದ್ದೇನೆ ತಪ್ಪು ತಿಳಿಯಬೇಡಿ. ಆದಷ್ಟು ಬೇಗ ನೀವೆಲ್ಲ ಪ್ರವಾಹ ಪ್ರದೇಶಗಳಿಗೆ ಹೋಗಿ, ಅಲ್ಲಿ ಏನು ಬೇಕು? ತಕ್ಷಣಕ್ಕೆ ಏನು ಮಾಡಬೇಕು ಎನ್ನುವುದನ್ನ ತಿಳಿದುಕೊಂಡು ನನಗೆ ವಿಷಯ ತಿಳಿಸಿದರೆ ನಾವೆಲ್ಲಾ ಸೇರಿ ನಮ್ಮವರಿಗೆ ಏನಾದರು ಮಾಡೋಣ ಎಂಬ ಚಿಕ್ಕ ಕೋರಿಕೆ. ಇದನ್ನು ಮನವಿ ಎಂದು ಪರಿಗಣಿಸಿ. ಧನ್ಯವಾದ ಎಂದು ವಿಡಿಯೋದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಜೊತೆಗೆ ಹಲವು ಸ್ಯಾಂಡಲ್‍ವುಡ್ ಕಲಾವಿದರು ಕೂಡ ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ, ಸಹಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾದ್ದಾರೆ.

ಬನ್ನಿ ಒಬ್ಬರಿಗೊಬ್ಬರು ಕೈ ಜೋಡಿಸಿ, ಉತ್ತರ ಕರ್ನಾಟಕದ ಮಳೆ ಸಂತ್ರಸ್ತರಿಗೆ ಸಹಾಯ ಮಾಡುವ. ಸಮಯಕ್ಕೆ ಉಪಯೋಗ ಆಗುವ ವಸ್ತುಗಳ ಧಾನಮಾಡುವ. ವಿಶ್ವದ ಎಲ್ಲೆಡೆ ಇರುವ ಕನ್ನಡದ ಬಂಧುಗಳೇ ಉತ್ತರ ಕರ್ನಾಟಕ ಬಂಧುಗಳ ರಕ್ಷಣೆಗೆ ವ್ಯಾಪಕ ಪ್ರಚಾರಮಾಡಿ ವಿನಂತಿ. ಕಷ್ಟದಲ್ಲಿ ಮೊದಲು ಆಗುವನೆ ಕನ್ನಡದ ನೆಂಟ ಎಂದು ನಿರೂಪಿಸುವ. ಧನ್ಯವಾದಗಳು ಎಂದು ನವರಸ ನಾಯಕ ಜಗ್ಗೇಶ್ ಅವರು ಕೂಡ ಟ್ವೀಟ್ ಮಾಡಿ ಪ್ರವಾಹ ಸಂತ್ರಸ್ತರಿಗಾಗಿ ಮನವಿ ಮಾಡಿಕೊಂಡಿದ್ದಾರೆ.

ಹಾಗೆಯೇ ನಟ ಶ್ರೀಮುರುಳಿ ಟ್ವೀಟ್ ಮಾಡಿ, ಸದ್ಯಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪರಿಹಾರ ಸಾಮಾಗ್ರಿಗಳು ಈಗಿನ ಮಟ್ಟಿಗೆ ಅವಶ್ಯಕತೆ ಇರುವುದಿಲ್ಲ. ಸದ್ಯ ನಮಗೆ ಸಣ್ಣ ಪ್ರಮಾಣದ ಬೋಟ್‍ಗಳು, ಲೈಫ್ ಜ್ಯಾಕೇಟ್‍ಗಳ ಅವಶ್ಯಕತೆ ಇದೆ. ಈ ಕುರಿತು ಮಾಹಿತಿ ಇದ್ದಲ್ಲಿ ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ, ಇಲ್ಲಾ ಬೆಳಗಾವಿ ಡಿಸಿ ಆಫಿಸ್‍ನ 08312407290 ಈ ನಂಬರಿಗೆ ಸಂಪರ್ಕ ಮಾಡಿ ಎಂದು ಪೋಸ್ಟ್ ಹಾಕಿ ಕೋರಿಕೊಂಡಿದ್ದಾರೆ.

ಇತ್ತ ಗಾಯಕ ಚಂದನ್ ಶೆಟ್ಟಿ ಅವರು ಕೂಡ ಟ್ವೀಟ್ ಮಾಡಿ, ಭಾರೀ ಮಳೆಯಿಂದ ತೊಂದರೆಗೆ ಸಿಲುಕಿರೋ ಎಲ್ಲಾ ಸಂತ್ರಸ್ತರು ಕ್ಷೇಮವಾಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ ಎಂದಿದ್ದಾರೆ.

ನಟ ಉಪೇಂದ್ರ ಅವರು ಕೂಡ ಟ್ವೀಟ್ ಈ ಬಗ್ಗೆ ಟ್ವೀಟ್ ಮಾಡಿ, #SaveUttarKarnataka, ಉತ್ತರ ಕರ್ನಾಟಕ ಎದುರಿಸುತ್ತಿರುವ ಪ್ರವಾಹದ ಫೋಟೋಗಳನ್ನು ಹಾಕಿ ದಯವಿಟ್ಟು ಗಮನಿಸಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *