ಸುಡಾನ್ ಸೈನಿಕರ ಸಂಘರ್ಷ – 200ಕ್ಕೆ ಏರಿದ ಸಾವಿನ ಸಂಖ್ಯೆ, ಸಾವಿರಾರು ಜನರಿಗೆ ಗಾಯ

Public TV
1 Min Read

– ಯುದ್ಧ ಪರಿಸ್ಥಿತಿ ನಿರ್ಮಾಣ

ಖಾರ್ಟೂಮ್: ಸುಡಾನ್‌ನಲ್ಲಿ (Sudan) ಸೇನೆ (Army) ಮತ್ತು ಅರೆಸೇನಾಪಡೆಗಳ (Paramilitary) ನಡುವಿನ ಸಂಘರ್ಷ ಕಳೆದ 3 ದಿನಗಳಿಂದ ನಡೆಯುತ್ತಿದ್ದು, ಪರಿಸ್ಥಿತಿ ತೀವ್ರಗೊಂಡಿದೆ. ಘರ್ಷಣೆಯಲ್ಲಿ (Conflict) ಸುಮಾರು 200 ಜನರು ಸಾವನ್ನಪ್ಪಿದ್ದಾರೆ. 1,800ಕ್ಕೂ ಅಧಿಕ ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ (Khartoum) ಸೇನೆ ಹಾಗೂ ಅರೆಸೈನಿಕ ಪಡೆಯ ನಡುವೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಘರ್ಷ ಉಂಟಾಗಿದೆ. ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ಹಿನ್ನೆಲೆ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ. ಇದೀಗ ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

3 ದಿನಗಳಿಂದ ನಡೆಯುತ್ತಿರುವ ಘರ್ಷಣೆಯಿಂದಾಗಿ ಒಂಡರ್ಮನ್ ನಗರ, ದಕ್ಷಿಣ ಡಾರ್ಫರ್, ನ್ಯಾಲಾ, ರಾಜಧಾನಿ ಖಾರ್ಟೂಮ್ ಸೇರಿದಂತೆ ವಿವಿಧ ನಗರಗಳು ನಲುಗಿ ಹೋಗಿವೆ. ಅಲ್ಲಲ್ಲಿ ಸೇನೆ ಹಾಗೂ ಅರೆಸೇನಾ ಪಡೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ರೈಸ್ ಮಿಲ್ ಕಟ್ಟಡ ಕುಸಿತ – ನಾಲ್ವರು ಸಾವು, 20 ಮಂದಿಗೆ ಗಾಯ

ಸೇನೆ ಹಾಗೂ ಅರೆಸೇನಾಪಡೆ ನಡುವೆ ಅಧಿಕಾರಕ್ಕೆ ಸಂಬಂಧಪಟ್ಟಂತೆ ಉಂಟಾಗಿರುವ ಬಿಕ್ಕಟ್ಟು ಉಲ್ಬಣಗೊಂಡಿದೆ. ಸೇನೆಗಿಂತಲೂ ಅರೆಸೇನಾಪಡೆ ಪ್ರಬಲವಾಗಿದೆ ಎಂದು ಮೂಲಗಳು ತಿಳಿಸಿದೆ. ಘರ್ಷಣೆಯಲ್ಲಿ ಭಾನುವಾರ ಭಾರತ ಮೂಲದ ವ್ಯಕ್ತಿಯೊಬ್ಬರು ಗುಂಡಿನ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್

Share This Article