ಕೋಲಾರದ ಮಾಲೂರಿನಲ್ಲಿ ಯಶಸ್ವಿ RSS ಶತಾಬ್ದಿ ಪಥಸಂಚಲನ – ಮಹಿಳೆಯರಿಂದ ಗಣ ವೇಷಧಾರಿಗಳ ಮೇಲೆ ಪುಷ್ಪಾರ್ಚನೆ

Public TV
2 Min Read

ಕೋಲಾರ: ರಾಜ್ಯದಲ್ಲಿ ಹಲವು ಗೊಂದಲ, ಪರ-ವಿರೋಧದ ನಡುವೆಯೂ ಕೋಲಾರ (Kolar) ಜಿಲ್ಲೆ ಮಾಲೂರು (Malur) ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ (RSS Parade) ಅದ್ಧೂರಿಯಾಗಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜಿಲ್ಲಾಡಳಿತದ ಅನುಮತಿ ಪಡೆದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಕ್ರೀಡಾಂಗಣದಲ್ಲೇ ಜಮಾವಣೆಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪಥಸಂಚಲನ ನಡೆಸಲಾಯಿತು.

ಹಲವು ಗೊಂದಲ ವಾದ-ವಿವಾದಗಳ ನಡುವೆಯೂ ಇಂದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆದು ಆರ್‌ಎಸ್‌ಎಸ್ ಪಥಸಂಚಲನ ಎಂದಿಗಿಂತಲೂ ಅದ್ಧೂರಿಯಾಗಿ ನಡೆಯಿತು. ಸುಮಾರು ಮೂರು ಸಾವಿರಕ್ಕೂ ಅಧಿಕ ಆರ್‌ಎಸ್‌ಎಸ್ ಗಣವೇಷಧಾರಿಗಳು ಜಮಾವಣೆಗೊಂಡು ನಗರದಲ್ಲಿ ನಾಲ್ಕು ಕಿ.ಮೀ ಪಥಸಂಚಲನಕ್ಕೆ ಅನುಮತಿ ಪಡೆದು ಪೊಲೀಸರು ನೀಡಿದ ರೂಟ್ ಪ್ರಕಾರವಾಗಿಯೇ ಪಥಸಂಚಲನ ನಡೆಸಲಾಯಿತು.

ಮೊದಲಿಗೆ ಮಾಲೂರು ಹೊಂಡಾ ಸ್ಟೇಡಿಯಂನಲ್ಲಿ ಜಮಾವಣೆಗೊಂಡು ನಂತರ ಆರ್‌ಎಸ್‌ಎಸ್ ಗೀತೆ ಹಾಡಿ ಅಲ್ಲಿಂದ ಮಾಲೂರಿನ ಬಿಇಓ ಕಚೇರಿ ವೃತ್ತ, ಕುವೆಂಪು ವೃತ್ತ, ಧರ್ಮರಾಯ ಸ್ವಾಮಿ ದೇವಾಲಯ, ಅಗ್ರಹಾರ ಬೀದಿ, ಕುಂಬಾರಪೇಟೆ ವೃತ್ತ, ದೊಡ್ಡಪೇಟೆ, ಮಹಾರಾಜ ಸರ್ಕಲ್, ಬಾಬುರಾವ್ ರಸ್ತೆ, ಕೆಂಪೇಗೌಡ ಸರ್ಕಲ್, ಮಾರಿಕಾಂಭಾ ಸರ್ಕಲ್, ಬ್ರಹ್ಮಕುಮಾರಿ ರಸ್ತೆ, ಅರಳೇರಿ ರಸ್ತೆಯ ಮೂಲಕ ಮತ್ತೆ ಹೋಂಡಾ ಸ್ಟೇಡಿಯಂವರೆಗೆ ನಾಲ್ಕು ಕಿ.ಮೀ ಪಥಸಂಚಲನ ನಡೆಯಿತು. ಪಥಸಂಚಲನದ ದಾರಿಯುದ್ದಕ್ಕೂ ಸಾವಿರಾರು ಜನರು ರಸ್ತೆ ಬದಿಯಲ್ಲಿ ನಿಂತು ಪಥಸಂಚಲನವನ್ನು ಕಣ್ತುಂಬಿಕೊಂಡರು. ಜನರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ವಿಡಿಯೋ ಮಾಡಿಕೊಂಡರು. ಇನ್ನು ಪಥಸಂಚಲನ ಸಾಗಿದ ದಾರಿಯುದ್ದಕ್ಕೂ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪಥ ಸಂಚಲನದ ಗಣವೇಷಧಾರಿಗಳ ಮೇಲೆ ಹೂವಿನ ಸುರಿಮಳೆಗೈದರು. ಇನ್ನು ನಗರದ ಮಸೀದಿ ಬೀದಿಯಲ್ಲೂ ಕೂಡಾ ಜನರು ಗಣವೇಷಧಾರಿಗಳು ಸಾಗುವ ರಸ್ತೆಯಲ್ಲಿ ಹೂ ಹಾಕಿ ಸ್ವಾಗತಿಸಿದರು. ಪಥಸಂಚಲನದ ನಂತರ ಮಾತನಾಡಿದ ಮಾಜಿ ಸಂಸದ ಮುನಿಸ್ವಾಮಿ ಯಾರು ಎಷ್ಟೇ ವಿರೋಧ ಮಾಡಿದಷ್ಟು ಜನ ಬೆಂಬಲ ಜಾಸ್ತಿಯಾಗುತ್ತದೆ, ಯಾರೋ ಕೆಲವು ಕುನ್ನಿಗಳು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ, ಜನರ ಬೆಂಬಲ ಆರ್‌ಎಸ್‌ಎಸ್ ಪರ ಇದೆ ಅನ್ನೋದಕ್ಕೆ ಮಾಲೂರಿನ ಪಥಸಂಚಲನವೇ ಸಾಕ್ಷಿ ಎಂದರು.

ಇನ್ನು ಆರ್‌ಎಸ್‌ಎಸ್ ಮೊದಲಿನಿಂದಲೂ ರಾಜ್ಯದಲ್ಲಿ ಹಲವು ಗೊಂದಲಗಳಿದ್ದರೂ ಕೂಡಾ ಜಿಲ್ಲಾಡಳಿತದ ಅನುಮತಿ ಪಡೆದು, ಪೊಲೀಸ್ ಇಲಾಖೆಯ ಅನುಮತಿ ಪಡೆದು ಯಶಸ್ವಿಯಾಗಿ ನಿರೀಕ್ಷೆಗೂ ಮೀರಿದ ಗಣವೇಷಧಾರಿಗಳನ್ನು ಸೇರಿಸಿಕೊಂಡು ಪಥಸಂಚಲ ನಡೆಸಲಾಗಿದೆ. ಆರ್‌ಎಸ್‌ಎಸ್ ಅಸ್ಥಿತ್ವಕ್ಕೆ ಬಂದು ನೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಶತಾಬ್ದಿ ಪಥಸಂಚಲನ ನಡೆಸುವ ಮೂಲಕ ದೇಶದಾಂದ್ಯಂತ ಒಂದು ಸಂಚಲನ ಮೂಡಿಸುವ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಮೂಗುದಾರ ಹಾಕುವ ಪ್ರಯತ್ನ ಮಾಡಿತಾದರೂ, ಇಂದು ಮಾಲೂರಿನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಯಶಸ್ವಿಯಾಗಿ ನಡೆಯಿತು. ಇನ್ನು ಪಥಸಂಚಲದಲ್ಲಿ ವಿಶೇಷ ಆಕರ್ಷಣೆ ಎನ್ನುವಂತೆ ಪುಟಾಣಿ ಮಕ್ಕಳು ಕೂಡಾ ಗಣವೇಷ ಧರಿಸಿ ಕೋಲು ಹಿಡಿದು ಪಥಸಂಚಲದಲ್ಲಿ ಸಾಗಿ ಗಮನ ಸೆಳೆದರು. ಇನ್ನು ಪಥಸಂಚಲನದಲ್ಲಿ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಮಾಜಿ ಶಾಸಕ ಮಂಜುನಾಥಗೌಡ, ಮಾಜಿ ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Share This Article