– ಎಸ್.ಎಂ.ಕೃಷ್ಣ ಅವರ ಹುಟ್ಟುಹಬ್ಬದ ಅಂಗವಾಗಿ ದಿನೇಶ್ ಗೂಳಿಗೌಡ ಮನವಿ
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ಮುತ್ಸದ್ಧಿ, ಎಸ್.ಎಂ.ಕೃಷ್ಣ (S.M.Krishna) ಅವರ ಸಾಧನೆ, ಸಾರ್ಥಕ ಜೀವನದ ಕುರಿತು ಅಧ್ಯಯನ ನಡೆಸಲು ‘ಎಸ್.ಎಂ.ಕೃಷ್ಣ ಅಧ್ಯಯನ ಪೀಠ’ ಸ್ಥಾಪಿಸಬೇಕೆಂಬ ಶಾಸಕ ದಿನೇಶ್ ಗೂಳಿಗೌಡ (Dinesh Gooligowda) ಅವರ ಮನವಿಗೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವರು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ವಿಶ್ವವಿದ್ಯಾನಿಲಯ ಉಪಕುಲಪತಿಗೆ ಸೂಚನೆ ನೀಡಿದ್ದಾರೆ.
ಎಸ್.ಎಂ.ಕೃಷ್ಣ ಅವರು ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳು ನಡೆದಿವೆ. ಬೆಂಗಳೂರನ್ನು ಜಾಗತಿಕ ಐಟಿ-ಬಿಟಿ ಕೇಂದ್ರವನ್ನಾಗಿ ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದನ್ನೂ ಓದಿ: ಇದು ಆಡಳಿತವಲ್ಲ, ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ
ಕೇವಲ ನಗರಾಭಿವೃದ್ಧಿಯಷ್ಟೇ ಅಲ್ಲದೆ, ಗ್ರಾಮೀಣ ಕರ್ನಾಟಕದ ಸಬಲೀಕರಣಕ್ಕಾಗಿ ಕಂದಾಯ ದಾಖಲೆಗಳನ್ನು ಗಣಕೀಕರಿಸಿದ ‘ಭೂಮಿ’ ಯೋಜನೆ, ರೈತರಿಗಾಗಿ ‘ಯಶಸ್ವಿನಿ’ ಆರೋಗ್ಯ ವಿಮೆ ಹಾಗೂ ಶಾಲಾ ಮಕ್ಕಳಿಗಾಗಿ ‘ಅಕ್ಷರ ದಾಸೋಹ’ (ಬಿಸಿಯೂಟ) ದಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರದ್ದಾಗಿದೆ. ಸದಾ ಶಾಂತಚಿತ್ತದ ರಾಜಕಾರಣಿ ಎನಿಸಿಕೊಂಡಿದ್ದ ಎಸ್.ಎಂ.ಕೃಷ್ಣ ಅವರ ಸಜ್ಜನಿಕೆ, ಆಡಳಿತಾತ್ಮಕ ದೂರದೃಷ್ಟಿ ಮತ್ತು ರಾಜತಾಂತ್ರಿಕ ನೈಪುಣ್ಯತೆ ಇಂದಿನ ರಾಜಕಾರಣಿಗಳಿಗೆ ಮಾದರಿ ಹಾಗೂ ಯುವಕರಿಗೆ ಅನುಕರಣೀಯ.
ಈ ಹಿನ್ನೆಲೆಯಲ್ಲಿ, ಅವರ ಶಿಕ್ಷಣ, ರಾಜಕೀಯ ಸಾಧನೆಗಳು, ಆಡಳಿತ ಶೈಲಿ, ಸಾರ್ವಜನಿಕ ನೀತಿಗಳು ಹಾಗೂ ಅಭಿವೃದ್ಧಿ ದೃಷ್ಟಿಕೋನವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಮೈಸೂರು ಅಥವಾ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಎಸ್.ಎಂ.ಕೃಷ್ಣ ಅಧ್ಯಯನ ಪೀಠವನ್ನು ಸ್ಥಾಪಿಸುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ.
ಈ ಅಧ್ಯಯನ ಪೀಠದ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಅವರ ಆಡಳಿತಾತ್ಮಕ ಕಾರ್ಯಪದ್ಧತಿಗಳನ್ನು ಸಂಶೋಧನೆಗೊಳಪಡಿಸಿ, ಭವಿಷ್ಯದ ಸಾರ್ವಜನಿಕ ಸೇವೆಗೆ ಪೂರಕವಾದ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ, ಸರ್ಕಾರವು ಶೀಘ್ರದಲ್ಲೇ ಈ ಅಧ್ಯಯನ ಪೀಠವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಇದಕ್ಕಾಗಿ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಎಸ್.ಎಂ.ಕೃಷ್ಣ ಅವರ ಹುಟ್ಟುಹಬ್ಬದ ದಿನವಾದ ಮೇ 1ರಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ದಿನೇಶ್ ಗೂಳಿಗೌಡ ಅವರು ಪತ್ರದ ಮುಖೇನ ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಇಬ್ಬರ ಜಗಳ ಮೂರನೇಯವನಿಗೆ ಲಾಭದಂತಾಗಿದೆ, ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆಯೂ ಪ್ರಯತ್ನಿಸ್ತಿದ್ದಾರೆ: ಆರ್.ಅಶೋಕ್
ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಚಿವ ಸುಧಾಕರ್ ಅವರು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗೆ ಸೂಚನೆ ನೀಡಿದ್ದಾರೆ.

