ಮಾವೀರ…ರಾಜ್ ಬಿ ಶೆಟ್ಟಿ (Raj B Shetty) ಅವರ ಹೊಸ ಪಾತ್ರದ ಹೆಸರು..ಸದ್ಯ ಕರುಣಾಕರ ಗುರೂಜಿಯಾಗಿ ಅಭಿಮಾನಿಗಳ ಹೃದಯ ಗೆದ್ದಿರುವ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಂದಹಾಗೆ ಮಾವೀರನಾಗಿ ರಾಜ್ ಶೆಟ್ಟಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವುದು ಕರಾವಳಿ ಸಿನಿಮಾದಲ್ಲಿ.
ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ (Karavali Movie) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಕರಾವಳಿ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ರಾಜ್ ಎಂಟ್ರಿ ಇಂದ ಕರಾವಳಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗಿದೆ.
ರಾಜ್ ಬಿ ಶೆಟ್ಟಿ ಲುಕ್ ಆಕರ್ಷಕವಾಗಿದ್ದು, ಯಾವ ಪಾತ್ರ ಎನ್ನುವ ಕುತೂಹಲ ಹೆಚ್ಚಾಗಿದೆ. ಎರಡು ಕೋಣಗಳ ಮಧ್ಯೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಬಿ ಶೆಟ್ಟಿ ಒಂದು ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ. ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದ ಮಾವೀರ ಎನ್ನುವುದು ಕುತೂಹಲ ಮೂಡಿಸಿದೆ. ರಾಜ್ ಪಾತ್ರದ ಬಗ್ಗೆ ಸಿನಿಮಾ ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಲುಕ್ ರಿಲೀಸ್ ಮಾಡುವ ಮೂಲಕ ಕರಾವಳಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ ಸಿನಿಮಾ ತಂಡ.
ಈಗಾಗಲೇ ಕರಾವಳಿ ಸಿನಿಮಾದಿಂದ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ರಾಜ್ ಬಿ ಶೆಟ್ಟಿ ಪೋಸ್ಟರ್ ಮತ್ತಷ್ಟು ಆಕರ್ಷಕವಾಗಿದ್ದು, ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರಾವಳಿಯಲ್ಲಿ ನಟ ಮಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ರಮೇಶ್ ಇಂದಿರಾ ಅವರ ಪಾತ್ರ ಕೂಡ ಸಿಕ್ಕಾಪಟ್ಟೆ ಪವರ್ಫುಲ್ ಆಗಿದೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.
ಕರಾವಳಿ ಹೆಸರೇ ಹೇಳುವ ಹಾಗೆ ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.