ಮಳೆಯಿಂದ ಹಾಸ್ಟೆಲ್ ಜಲಾವೃತ: ರಾತ್ರಿಯಿಡೀ ಛಾವಣಿ ಹತ್ತಿ ಕುಳಿತ ವಿದ್ಯಾರ್ಥಿಗಳು

Public TV
1 Min Read

ಕಲಬುರಗಿ: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿತ್ತಾಪುರ ತಾಲೂಕಿನ ಶಹಾಬಾದ್ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳಿಗೆ ನೀರು ನುಗ್ಗಿ ವಿದ್ಯಾರ್ಥಿಗಳು ರಾತ್ರಿಯಿಡೀ ಪರದಾಡಿದರು.

ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ನಾಗಾವಿ ಹಳ್ಳದ ಪ್ರವಾಹದಿಂದ ಈ ವಸತಿ ನಿಲಯ ಸಂಪೂರ್ಣ ಜಲಾವೃತವಾಗಿದೆ. ವಸತಿ ನಿಲಯದಲ್ಲಿ ಒಟ್ಟು 8 ವಿದ್ಯಾರ್ಥಿಗಳು, ಮಹಿಳಾ ಕಾವಲುಗಾರರು ಸೇರಿ ಎಲ್ಲರೂ ವಸತಿ ನಿಲಯದ ಕಟ್ಟಡದ ಛಾವಣಿ ಹತ್ತಿ ಕುಳಿತುಕೊಂಡಿದ್ದರು. ಇದನ್ನೂ ಓದಿ: ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

ವಸತಿ ನಿಲಯದಲ್ಲಿ 3 ರಿಂದ 4 ಅಡಿವರೆಗೆ ನೀರು ಸಂಗ್ರಹವಾದ ಹಿನ್ನೆಲೆ, ಪಠ್ಯಪುಸ್ತಕ ಹಾಗೂ ಪೀಠೋಪಕರಣಗಳು ಕೊಚ್ಚಿ ಹೋಗಿವೆ. ಇನ್ನು ಕೆಲ ಪೀಠೋಪಕರಣಗಳು ನೀರಿನಲ್ಲಿ ಜಲಾವೃತಗೊಂಡಿವೆ. ಮಕ್ಕಳ ಪಠ್ಯ ಪುಸ್ತಕವೆಲ್ಲ ನೀರಿನಲ್ಲಿ ಮುಳುಗಿದ್ದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಪಠ್ಯ ಪುಸ್ತಕಗಳು ಇಲ್ಲದೆ ಮಕ್ಕಳು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್ ನಡುವೆ ಕಾರ್ಖಾನೆಗೆ ಬೀಗ ಹಾಕಲು ರೈತರ ಯತ್ನ

ಇಂದು ಬೆಳಗ್ಗೆ ಮಳೆ ಕಡಿಮೆಯಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಕಳೆದ ಬಾರಿ ಕೂಡ ಮಳೆಗಾಲದಲ್ಲಿ ಇದೇ ರೀತಿ ವಸತಿ ನಿಲಯಗಳು ಜಲಾವೃತವಾಗಿದ್ದವು. ಪ್ರತಿ ಬಾರಿ ಧಾರಾಕಾರ ಮಳೆ ಸುರಿದರೆ ಸಾಕು ಈ ವಸತಿ ನಿಲಯಕ್ಕೆ ನೀರು ಹರಿದು ಬರುತ್ತದೆ. ಹೀಗಾಗಿ ಇದಕ್ಕೆ ಮುಕ್ತಿ ಕೊಡಿಸಬೇಕಾದ ಕೆಲಸವನ್ನು ಸರ್ಕಾರ ಇನ್ನಾದರೂ ಮಾಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *